ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಇತ್ತೀಚೆಗೆ ನನ್ನನ್ನು ಗುರಿಮಾಡಿಕೊಂಡಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯನವರದು ಕಳಂಕರಹಿತವಾದ ವ್ಯಕ್ತಿತ್ವ ಎಂಬ ಮಾತು ಅವರ ನಿದ್ದೆಗೆಡಿಸುತ್ತಿದೆ. ಹಾಗಾಗಿ ಅವರು ಇಲ್ಲಸಲ್ಲದ ಕಿತಾಪತಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಕುಮಾರಸ್ವಾಮಿ ಸೇರಿ ವಿಪಕ್ಷಗಳ ಹಲವು ನಾಯಕರು, ಮುಖಂಡರು ಮುಡಾ ಸೈಟ್ ಪಡೆದಿದ್ದಾರೆ. ಕುಮಾರಸ್ವಾಮಿ ಕೈಗಾರಿಕೆ ನಿರ್ಮಿಸಲು ಸೈಟ್ ಪಡೆದಿದ್ದರು. ಆದರೆ, ಕೈಗಾರಿಕೆ ಆರಂಭಿಸದೆ ಸಂಪೂರ್ಣವಾಗಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಇವರು ಪ್ರಶ್ನೆ ಮಾಡಿಲ್ಲ. ಇಲ್ಲಿ ವಿಧಾನಸಭೆಯನ್ನು ಅವರ ರಾಜಕಾರಣಕ್ಕೆ ಬಳಸಿಕೊಂಡರು, ಈಗ ಪಾರ್ಲಿಮೆಂಟನ್ನೂ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಡಾದಿಂದ ಪಡೆದಿರುವ ಸೈಟ್ಗಳ ವಿವರ ಮತ್ತು ಹೆಸರನ್ನು ಓದಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್, ಸಾ.ರಾ.ಮಹೇಶ್, ಸಿ.ಎನ್.ಮಂಜೇಗೌಡ ಸೇರಿ ಹಲವು ವಿಪಕ್ಷ ನಾಯಕರು, ಮುಖಂಡರು ಸೈಟ್ ಪಡೆದಿರುವ ಪಟ್ಟಿಯನ್ನು ಸಿಎಂ ಬಿಡುಗಡೆ ಮಾಡಿದರು.
ಗೋಮಾಳ ಸೇರಿ 200 ಎಕರೆ ಗುಳುಂ
ಬೆಂಗಳೂರಿಗೆ ಹೊಂದಿಕೊಂಡಂತೆ ಬಿಡದಿಯ ಬಳಿ ಇರುವ ಕೇತಗಾನಹಳ್ಳಿಯ ಸರ್ವೆ ನಂಬರ್ 7,8,9,10,16 ಮತ್ತು 17ರಲ್ಲಿ ಒಟ್ಟು 110.32 ಎಕರೆ ಸರ್ಕಾರಿ ಗೋಮಾಳ ಸೇರಿ 200 ಎಕರೆ ಜಮೀನನ್ನು ಎಚ್. ಡಿ ಕುಮಾರಸ್ವಾಮಿ ಮತ್ತವರ ಕುಟುಂಬದವರು ಹಾಗೂ ಮದ್ದೂರು ಶಾಸಕರಾದ ಡಿ.ಸಿ. ತಮ್ಮಣ್ಣ ಮತ್ತವರ ಕುಟುಂಬದವರು ನಿಯಮಗಳನ್ನು ಉಲ್ಲಂಘಿಸಿ ಭೂ ಕಬಳಿಸಿರುವುದಾಗಿ ಆರೋಪಿಸಿದ ಸಿಎಂ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ 200 ಎಕರೆ ಸರ್ಕಾರಿ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿ ದಿನಾಂಕ 20214ರ ಆ. 25ರಂದು ಜಿಲ್ಲಾಧಿಕಾರಿಗಳಿಗೆ ಅಂದಿನ ಎಸಿ ಸಿದ್ದಪ್ಪ ಪತ್ರ ಬರೆದಿದ್ದರು.
ಇದಕ್ಕೂ ಮೊದಲು ಎಸಿ ಸಿದ್ದಪ್ಪ ಅವರು 2011ರಲ್ಲಿ ಜಿ. ಮಾದೇಗೌಡ ಅವರು ಲೋಕಾಯುಕ್ತದಲ್ಲಿ ದಾಖಲಿಸಿದ್ದ ದೂರು ಪ್ರಕರಣದಲ್ಲಿ ವಿಚಾರಣೆ ನಡೆಸಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದರು. ಅವರ ಪ್ರಕಾರ, ಈ 200 ಎಕರೆ ಭೂಮಿಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79 ಎ ಮತ್ತು ಬಿ ಹಾಗೂ 66, ಪಿಟಿಸಿಎಲ್ ಕಾಯ್ದೆ, ಮುದ್ರಾಂಕ ಪಾವತಿಸದೆ ಮೋಸ ಮಾಡಿರುವುದು, ಸರ್ಕಾರಿ ಜಮೀನುಗಳನ್ನು ಕಬಳಿಸಲಾಗಿದೆ ಹಾಗೂ ಕಂದಾಯ ಇಲಾಖೆಯ ಮಾಹಿತಿಗಳ ಪ್ರಕಾರ ಕೇತಗಾನಹಳ್ಳಿಯ ಸ. ನಂ 60 ಮತ್ತು 62 ರಲ್ಲಿ ವ್ಯಾಪಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ದ್ರೋಹ ಮಾಡಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದರು.
ದಿನಾಂಕ 18-2-2017 ರಲ್ಲಿ ಮುಡಾ ಆಯುಕ್ತರಿಗೆ ಬದಲಿ ನಿವೇಶನ ಕೊಡುವಂತೆ ಕುಮಾರಸ್ವಾಮಿ ಮನವಿ ಕೊಟ್ಟಿದ್ದಾರೆ. ಅವರಿಗೆ ಬದಲಿ ನಿವೇಶನ ಕೊಡಲು 7-1-2023 ರಂದು ಮುಡಾ ನಿರ್ಣಯ ಮಾಡಿದೆ. ಅದೇ ಜಾಗದಲ್ಲಿ ಅಕ್ರಮವಾಗಿದ್ದ ಇನ್ನೊಬ್ಬರು ವ್ಯಕ್ತಿ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಇದು ನಿಂತಿದೆ. ಇಷ್ಟೆಲ್ಲ ಅಕ್ರಮ ಮಾಡಿ ಕುಮಾರಸ್ವಾಮಿ ವೇದಾಂತ ಮಾತಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
