ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ನಿರ್ದೇಶಕ ವಿನೋದ್ ದೊಂಡಾಲೆ ನಾಗಾರಬಾವಿಯ ತಮ್ಮ ನಿವಾಸದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಕನ್ನಡ ಕಿರುತೆರೆಯಲ್ಲಿ ‘ಕರಿಮಣಿ’, ‘ಮೌನರಾಗ’ ಸೇರಿದಂತೆ ‘ಶಾಂತಂ ಪಾಪಂ’ ಧಾರಾವಾಹಿಯ ಕೆಲ ಎಪಿಸೋಡ್ಗಳನ್ನು ಕೂಡ ನಿರ್ದೇಶನ ಮಾಡಿರುವ ಅವರು ಚಂದನವನದಲ್ಲಿ ನಿರ್ದೇಶಕರಾಗಿ ಕಾಲಿಡಲು ಸಜ್ಜಾಗಿದ್ದರು. ಸತೀಶ್ ನೀನಾಸಂ ಅವರ ‘ಅಶೋಕ ಬ್ಲೇಡ್’ ಚಿತ್ರವನ್ನು ಅವರು ನಿರ್ದೇಶನ ಮಾಡುವ ತಯಾರಿಯಲ್ಲಿದ್ದರು.
ಮುಂದಿನ ವಾರದಿಂದ ಈ ಚಿತ್ರದ ಚಿತ್ರೀಕರಣ ಆರಂಭಗೊಳ್ಳಬೇಕಿತ್ತು. ಶುಕ್ರವಾರವಷ್ಟೇ (ಜು.19ರಂದು) ಚಿತ್ರತಂಡದ ಜೊತೆ ವಿನೋದ್ ಮಾತನಾಡಿ ಬಂದಿದ್ದರು ಎನ್ನಲಾಗಿದೆ.
ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ಅವರು, ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಪೊಲೀಸರು ವಿನೋದ್ ಅವರ ಆತ್ಮಹತ್ಯೆ ಹಿಂದಿನ ನಿಖರ ಕಾರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
