ಬೆಂಗಳೂರು: “ನನ್ನ ಹತ್ರ ಕಾಸಿಲ್ಲ ಎಂದು ಮೋದಿಗೆ ಹೇಳಿದೆ. ಅವರೇ ನನ್ನ ಬದಲಿಗೆ ಟಿಕೆಟ್ ಖರೀದಿಸಿದರು. ಅವರದ್ದೇ ಕಾರ್ಡ್ನಲ್ಲಿ ಕಾರ್ಡ್ನ್ನು ಸ್ವೈಪ್ ಮಾಡಿ ಟಿಕೆಟ್ ತೆಗೆದುಕೊಂಡರು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾಳೇನ ಅಗ್ರಹಾರದಿಂದ ಸುದ್ದುಗುಂಟೆಪಾಳ್ಯ ಪಿಂಕ್ ಲೈನ್ ಮೆಟ್ರೋ ವಿಸ್ತರಿತ ಮಾರ್ಗವನ್ನು ಶುಕ್ರವಾರ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಉದ್ಘಾಟನೆ ವೇಳೆ ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಕಾರ್ಡ್ ಬಳಸಿ ಟಿಕೆಟ್ ಖರೀದಿಸಿದ್ದರು.
“ಈ ವೇಳೆ ನನ್ನ ಬಳಿ ಕಾಸಿಲ್ಲ ಎಂದೆ” ಅವರ ಕಾರ್ಡ್ ಬಳಸಿ ನನಗೂ ಟಿಕೆಟ್ ತೆಗೆದುಕೊಂಡರು. ಇದೇ ಅವರು ನೀಡಿರುವ ಕಾರ್ಡ್” ಎಂದು ಸಿಎಂ ಡಿಕೆಶಿ ಅವರು ತೋರಿಸಿದರು.
ಇಂದಿನಿಂದ ಸಾರ್ವಜನಿಕ ಬಳಕೆಗೆ ಪಿಂಕ್ ಲೈನ್ ತೆರೆಯಲಾಗಿದ್ದು, ಆರಂಭಗೊಂಡ ಮೊದಲ ದಿನವೇ ಸಾಮಾನ್ಯ ಪ್ರಯಾಣಿಕರೊಂದಿಗೆ ಸಿಎಂ ಪ್ರಯಾಣಿಸಿದರು. ಸಿಎಂ ನೋಡುತ್ತಿದ್ದಂತೆ ಪ್ರಯಾಣಿಕರು ಸಂತಸಗೊಂಡು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಾಳೇನ ಅಗ್ರಹಾರದಿಂದ ಸುದ್ದುಗುಂಟೆಪಾಳ್ಯದವರೆಗೆ ಮೆಟ್ರೋ ನಿಲ್ದಾಣದಲ್ಲಿ ಸಿಎಂ ಅವರು ಸಂಚರಿಸಿದರು.
“ಮೋದಿ ಹಾಗೂ ನಿಮ್ಮ ನಡುವಿನ ಒಡನಾಟ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜಕಾರಣ ಬೇರೆ, ಅಭಿವೃದ್ಧಿ ಬೇರೆ. ಚುನಾವಣೆ ಬಂದಾಗ ರಾಜಕಾರಣ ಮಾಡುವೆ. ಕರ್ನಾಟಕ ಅಭಿವೃದ್ಧಿಯಾಗದೇ ದೇಶ ಅಭಿವೃದ್ಧಿ ಹೇಗೆ ಸಾಧ್ಯ. ದೇಶದಲ್ಲಿ ರಾಜ್ಯವೇ ಅತಿ ಹೆಚ್ಚು ಜಿಎಸ್ಟಿ ಪಾವತಿಸುವಲ್ಲಿ ಮೊದಲ ಸ್ಥಾನವಿದೆ. ವರ್ಷಕ್ಕೆ 1.50 ಲಕ್ಷ ಇಂಜಿನಿಯರ್ಗಳು ಹೊರಬರುತ್ತಿದ್ದಾರೆ” ಎಂದರು.
“ಶೇ.50:50 ಅನುಪಾತದಲ್ಲಿ ಮೆಟ್ರೋ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಬೇಕು. ಪ್ರಸ್ತಾವಿತ ಮೆಟ್ರೋ ಯೋಜನೆಗಳಿಗೆ ಅನುಮೋದನೆ ನೀಡಬೇಕು. ಕೇಂದ್ರ ಸರ್ಕಾರದಿಂದ ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. 2028ರೊಳಗೆ 500 ಕಿಲೋಮೀಟರ್ವರೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸುವ ಗುರಿಯಿದೆ” ಎಂದು ತಿಳಿಸಿದರು.
