Trending

ಓಟು ಹಾಕಲು ಹಣ ಹಂಚಿಕೆ – ಸೋತ ಬಳಿಕ ಹಣ ವಾಪಸ್ ಕೇಳಿದ ಅಭ್ಯರ್ಥಿ 

Spread the love

ಅಮರಾವತಿ : ಮತದಾನದ ಮೊದಲು ತನಗೆ ವೋಟು ಹಾಕಲು ಹಣ ಹಂಚಿದ್ದ ಅಭ್ಯರ್ಥಿ ಸೋತ ಬಳಿಕ ಹಣ ವಾಪಸ್‌ ಮಾಡುವಂತೆ ಮತದಾರರ ಬಳಿ ಕೇಳಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಪುರಸಭೆಯ 32ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿಯ ಅಭ್ಯರ್ಥಿ ಕೆ. ರೆಡ್ಡಿ ಪ್ರಸಾದ್‌ ಇದೀಗ ಮತದಾರರ ಬಳಿ ಹಣ ಕೇಳುವ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರೆಡ್ಡಿ ಪ್ರಸಾದ್‌ ಜನ ಸೇನಾ ಪಾರ್ಟಿಯ ಚೈತನ್ಯ ಮೋಹನ್‌ ವಿರುದ್ಧ ಸೋತ ಬಳಿಕ ಹತಾಶನಾಗಿ ಇದೀಗ ತಾವು ಹಂಚಿದ ಹಣ ವಾಪಸ್‌ ಕೇಳಿದ್ದಾರೆ.

ಸದ್ಯ ಅವರ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಚುನಾವಣೆಯಲ್ಲಿ ಜಯಗಳಿಸುವ ಉದ್ದೇಶದಿಂದ ಪ್ರತಿ ಮತದಾರರಿಗೆ 1,000 ರೂಪಾಯಿಯಂತೆ ಹಂಚಲು ಅಧಿಕ ಬಡ್ಡಿ ದರ ತೆತ್ತು 10 ಲಕ್ಷ ರೂಪಾಯಿ ಸಾಲ ಮಾಡಿದ್ದಾಗಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ

ಸೋತ ಹತಾಶೆಯಲ್ಲಿ ಮತದಾರರ ವಿರುದ್ಧ ಕಿಡಿಕಾರಿದ ಅವರು 400 ಮಂದಿ ಹಣ ಪಡೆದು ತನಗೆ ಮತ ಹಾಕಿಲ್ಲ ಎಂದಿದ್ದಾರೆ. ʼʼ400 ಮತದಾರರು ನನ್ನಿಂದ ಹಣ ಪಡೆದು ನನಗೆ ವೋಟು ಮಾಡಿಲ್ಲ. ಅವರು ನನಗೆ ಹಣ ಹಿಂದಿರುಗಿಸಬೇಕು. ಇಲ್ಲದಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇನೆʼʼ ಎಂದು ಎಚ್ಚರಿಸಿದ್ದಾರೆ.

ಕೆಲವು ಮತದಾರರು ಸ್ಥಳೀಯ ದೇವತೆಯಾದ ಮರೆಮ್ಮತಳ್ಳಿಯ ಹೆಸರಿನಲ್ಲಿ ಪ್ರಮಾಣ ಮಾಡಿ ಹಣವನ್ನು ಸ್ವೀಕರಿಸಿದ್ದರೂ ನಂತರ ಎದುರಾಳಿ ಅಭ್ಯರ್ಥಿಗೆ ಬೆಂಬಲ ನೀಡಿದರು ಎಂದು ಪ್ರಸಾದ್ ಆರೋಪಿಸಿದ್ದಾರೆ.

ಆ ಮತದಾರರು ತಾವು ಪಡೆದ ಹಣವನ್ನು ಮರೆಮ್ಮತಳ್ಳಿ ದೇವಸ್ಥಾನದಲ್ಲಿ ಹಿಂತಿರುಗಿಸಬೇಕೆಂದು ಹೇಳಿದ್ದಾರೆ. ಇದೇ ವೇಳೆ ಅವರು ವಿಜೇತ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣೆ ಪ್ರಚಾರದ ವೇಳೆ ವಾರ್ಡ್‌ಗೆ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರೂ ಎದುರಾಳಿಗಳ ಕುತಂತ್ರದಿಂದ ಸೋತಿದ್ದಾಗಿ ಹೇಳಿದ್ದಾರೆ.

[pj-news-ticker]