ಅನಂತಪುರ: ಆಂಧ್ರಪ್ರದೇಶದ ರಾಪ್ತಾಡು ಪಟ್ಟಣದ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಚೈನ್ಸಾದಿಂದ ಭೀಕರ ದಾಳಿ ನಡೆಸಿದ್ದ ಆರೋಪಿ ಹೇಮಂತ್ನ ಬಲಗಾಲನ್ನು ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿದ್ದಾರೆ.
ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಮೊಣಕಾಲಿನ ಮೇಲ್ಭಾಗದಿಂದ ಕಾಲು ತೆಗೆಯಲಾಗಿದೆ. ಪೊಲೀಸರ ಎನ್ಕೌಂಟರ್ ವೇಳೆ ಕಾಲಿಗೆ ಗುಂಡೇಟು ಬಿದ್ದ ಪರಿಣಾಮ ರಕ್ತಸಂಚಾರ ಸ್ಥಗಿತಗೊಂಡು ಗ್ಯಾಂಗ್ರೀನ್ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಹರಡಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವೈದ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.
ನ್ಯಾಯಾಲಯದ ನಿರ್ದೇಶನದಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ಡಿ. ಮಲ್ಲೇಶ್ವರಿ ತಿಳಿಸಿದ್ದಾರೆ.
ಇನ್ನು ಹೇಮಂತ್ನ ಎಡಗಾಲಿನ ರಕ್ತನಾಳಗಳಿಗೂ ಹಾನಿಯಾಗಿದ್ದು, ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ.
ಇತ್ತ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡುಬರುತ್ತಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
