Trending

ಶಿವಮೊಗ್ಗ– ಭದ್ರಾವತಿ ಮಾಸ್ಟರ್ ಪ್ಲಾನ್ 2041ಕ್ಕೆ ವಿರೋಧ : ಸಾರ್ವಜನಿಕ ಅಭಿಪ್ರಾಯ ಪಡೆಯದೆ ಕರಡು ಸಿದ್ಧಪಡಿಸಿದ ಆರೋಪ

Spread the love

ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ಮಹಾನಗರ ಯೋಜನೆ–2041ರ ಮಾಸ್ಟರ್ ಪ್ಲಾನ್ ರೂಪಿಸುವ ಸಂದರ್ಭದಲ್ಲಿ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯದೆ ಕರಡು ಸಿದ್ಧಪಡಿಸಲಾಗಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್‌ನ ಸಂಪೂರ್ಣ ವರದಿ, ಕರಡು ನಕ್ಷೆ ಹಾಗೂ ಪಿಡಿಎಫ್ ಪ್ರತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಯೋಜನೆ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿ, ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿದ ಬಳಿಕವೇ ಅಂತಿಮಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು. ಇದಕ್ಕೆ ಮಹಾನಗರ ಪಾಲಿಕೆ ಆಯುಕ್ತರೇ ಹೊಣೆಗಾರರಾಗಲಿದ್ದಾರೆ ಎಂದು ಎಚ್ಚರಿಸಿದರು.

ಕರಡು ಯೋಜನೆಯನ್ನು ಪ್ರಾಧಿಕಾರದ ಕಚೇರಿಯ ಒಳಭಾಗದ ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ. ಆದರೆ ಅಧಿಕಾರಿಗಳ ಸಹಿಯಿಲ್ಲದೆ, ಓದಲು ಸಾಧ್ಯವಾಗದಷ್ಟು ಚಿಕ್ಕದಾಗಿ ಪ್ರಕಟಿಸಲಾಗಿದೆ. ಯೋಜನೆಯ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಿಲ್ಲ. ಬಡಾವಣೆಗಳ ಹೆಸರು, ಸ್ಥಳಗಳ ಗುರುತು, ರಸ್ತೆಗಳ ಹೆಸರು ಹಾಗೂ ಅಗಲದ ವಿವರಗಳಿಲ್ಲದ ಕಾರಣ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ತೊಂದರೆಯಾಗುತ್ತಿದೆ ಎಂದರು.

ಮಹಾಯೋಜನೆ–2031ರಲ್ಲಿ 200 ಅಡಿ ರಸ್ತೆಯ ಪಕ್ಕದಲ್ಲಿ ಪ್ರಸ್ತಾಪಿಸಲಾಗಿದ್ದ ಆರು ಪ್ರಾದೇಶಿಕ ಉದ್ಯಾನಗಳ ಪೈಕಿ ಹಲವು ಯೋಜನೆಗಳನ್ನು ಕೈಬಿಟ್ಟಿರುವುದು ಅಥವಾ ಬದಲಾಯಿಸಿರುವುದಕ್ಕೆ ವಿರೋಧವಿದೆ. ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ 200 ಅಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗೆ ಸೇರಿಸಿರುವುದರಿಂದ ವರ್ತುಲ ರಸ್ತೆ ನಿರ್ಮಾಣದ ಉದ್ದೇಶವೇ ವಿಫಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋಟೆ–ಗಂಗೂರು ರೈಲ್ವೆ ಹಳಿ ದಾಟಿದ ಬಳಿಕ ಖಜಾನೆ ಬಡಾವಣೆ ಮೂಲಕ ಹಾದುಹೋಗಬೇಕಿದ್ದ 200 ಅಡಿ ರಸ್ತೆ ಹಾಗೂ ಬಿ.ಆರ್. ರಸ್ತೆಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಮೂಲಕ ಅನುಪಿನಕಟ್ಟೆಯವರೆಗೆ ಸಂಪರ್ಕ ಕಲ್ಪಿಸಬೇಕಿದ್ದ ವರ್ತುಲ ರಸ್ತೆ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ದೂರಿದರು.

ಎಪಿಎಂಸಿ ಹಿಂಭಾಗದ ಶ್ರೀಗಂಧ ಕಾವಲು ಪ್ರದೇಶದ ಹಾಲಕೊಳದಲ್ಲಿರುವ ಅರಣ್ಯ ಇಲಾಖೆಯ ಸುಮಾರು 12.50 ಎಕರೆ ಜಾಗವನ್ನು ಹಸಿರು ವಲಯದ ಬದಲಿಗೆ ಸಾರ್ವಜನಿಕ ವಲಯವೆಂದು ಗುರುತಿಸಿರುವುದಕ್ಕೆ ವಿರೋಧವಿದೆ. ತಾವರೆಚನ್ನಹಳ್ಳಿ ಒಳಚರಂಡಿ ಸಂಸ್ಕರಣಾ ಘಟಕದ ಪಕ್ಕದ ಪ್ರದೇಶವನ್ನೂ ಹಸಿರು ವಲಯದಿಂದ ಸಾರ್ವಜನಿಕ ಪ್ರದೇಶವನ್ನಾಗಿ ಬದಲಾಯಿಸಲಾಗಿದೆ. ಜ್ಞಾನನಗರಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೈಬಿಟ್ಟಿರುವುದು ಹಾಗೂ ವಿನೋಬನಗರ ಎರಡನೇ ಹಂತದ ಸಿ.ಎ. ನಿವೇಶನಕ್ಕೆ ಸಂಬಂಧಿಸಿದ ಪ್ರಸ್ತಾವನೆಯ ಬಗ್ಗೆಯೂ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದರು.

ಮಲೆನಾಡಿನ ಪರಿಸರ ಸಂರಕ್ಷಣೆಗೆ ಮಾಸ್ಟರ್ ಪ್ಲಾನ್‌ನಲ್ಲಿ ಆದ್ಯತೆ ನೀಡಬೇಕು. ಹೊಸ ಬಡಾವಣೆಗಳಲ್ಲಿ ಶೇ 15ರಿಂದ 20ರಷ್ಟು ಜಾಗವನ್ನು ನಗರ ಅರಣ್ಯೀಕರಣಕ್ಕೆ ಮೀಸಲಿಡಬೇಕು. ತುಂಗಾ ಮೇಲ್ದಂಡೆ ಹಾಗೂ ತುಂಗಾ, ಭದ್ರಾ ನದಿಗಳ ಎರಡೂ ದಂಡೆಗಳಲ್ಲಿ ಕನಿಷ್ಠ 100 ಅಡಿ ಅಗಲದ ಹಸಿರು ಕಾರಿಡಾರ್ ನಿರ್ಮಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಹಸಿರು ಬಫರ್ ವಲಯಗಳನ್ನು ರೂಪಿಸಬೇಕು. ಹಸಿರು ಪರಿಸರ, ಶುದ್ಧ ಗಾಳಿ ಹಾಗೂ ಆರೋಗ್ಯಕರ ವಾತಾವರಣಕ್ಕೆ ಪೂರಕವಾದ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಎಸ್.ಬಿ. ಅಶೋಕ್ ಕುಮಾರ್, ಕೇಶವಮೂರ್ತಿ, ಮಹಮದ್ ಇಕ್ಬಾಲ್, ನಾಗರಾಜ್, ಭಾಸ್ಕರ್ ಶೆಟ್ಟಿ, ಜನಾರ್ಧನ್ ಪೈ, ಚನ್ನವೀರಪ್ಪ, ಆನಂದ್, ತಿಮ್ಮಣ್ಣ ಹಾಗೂ ಗೌರೀಶ್ ಭಾರ್ಗವ್ ಉಪಸ್ಥಿತರಿದ್ದರು.

ಮಾಸ್ಟರ್ ಪ್ಲಾನ್ ದಾರಿ ತಪ್ಪಿದೆ: ಡಾ. ಸತೀಶ್ ಕುಮಾರ್ ಶೆಟ್ಟಿ

ಮಹಾನಗರ ಯೋಜನೆ–2041ರ ಮಾಸ್ಟರ್ ಪ್ಲಾನ್‌ನಲ್ಲಿ ಕನಿಷ್ಠ ಶೇ 20ರಷ್ಟಾದರೂ ಹಸಿರು ಪ್ರದೇಶಕ್ಕೆ ಆದ್ಯತೆ ನೀಡಬೇಕು. ಆದರೆ ಈಗಿನ ಕರಡಿನಲ್ಲಿ ಶೇ 5ರಷ್ಟೂ ಹಸಿರು ಪ್ರದೇಶಕ್ಕೆ ಆದ್ಯತೆ ನೀಡಿಲ್ಲ ಎಂದು ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ ಆರೋಪಿಸಿದರು.

ಅಧಿಕಾರಿಗಳು ಶೇ 13ರಷ್ಟು ಹಸಿರು ಪ್ರದೇಶವಿದೆ ಎಂದು ಹೇಳುತ್ತಿದ್ದಾರೆ. ಆದರೆ ಯೋಜನೆಯ ನಕ್ಷೆಯಲ್ಲಿ ಹಳದಿ ಮತ್ತು ಕೆಂಪು ಗುರುತುಗಳೇ ಹೆಚ್ಚಾಗಿ ಕಾಣುತ್ತಿವೆ. ನಮ್ಮ ನಗರ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯೇ ಇಲ್ಲದ ಅಧಿಕಾರಿಗಳನ್ನು ಮೊದಲು ಹೊರಗಿಡಬೇಕು. ಮಾಸ್ಟರ್ ಪ್ಲಾನ್ ಸಂಪೂರ್ಣವಾಗಿ ದಾರಿ ತಪ್ಪಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಸಿರು ವಲಯಕ್ಕೆ ಕ್ರೀಡಾಂಗಣಗಳ ಸೇರ್ಪಡೆಗೆ ಆಕ್ಷೇಪ

ಮಹಾನಗರ ಯೋಜನೆ–2041ರಲ್ಲಿ ಹಸಿರು ಮತ್ತು ಮುಕ್ತ ಪ್ರದೇಶದ ಪ್ರಮಾಣವನ್ನು ಹೆಚ್ಚಿಸಿ ತೋರಿಸಲಾಗಿದೆ. ಈ ವಿಚಾರದಲ್ಲಿ ಸ್ಥಳೀಯ ಶಾಸಕರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಕೆ.ವಿ. ವಸಂತ್ ಕುಮಾರ್ ಆರೋಪಿಸಿದರು.

ಮಾಸ್ಟರ್ ಪ್ಲಾನ್‌ನಲ್ಲಿ ಹಸಿರು ಮತ್ತು ಮುಕ್ತ ಪ್ರದೇಶದ ಪ್ರಮಾಣ ಶೇ 13.28 ಎಂದು ನಮೂದಿಸಲಾಗಿದೆ. ಆದರೆ ರಾಗಿಗುಡ್ಡ, ಫ್ರೀಡಂ ಪಾರ್ಕ್, ನೆಹರು ಕ್ರೀಡಾಂಗಣ, ನವಲೆ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣ, ವಾಜಪೇಯಿ ಬಡಾವಣೆಯ ಕ್ರೀಡಾ ವಲಯ ಹಾಗೂ ಸಹ್ಯಾದ್ರಿ ಕಾಲೇಜಿನ ಕ್ರೀಡಾ ಸಂಕೀರ್ಣಗಳಲ್ಲಿ ಸಾಕಷ್ಟು ಹಸಿರು ಪ್ರದೇಶವಿಲ್ಲದಿದ್ದರೂ ಅವುಗಳನ್ನು ಹಸಿರು ವಲಯವೆಂದು ಗುರುತಿಸಲಾಗಿದೆ. ಇದರಿಂದ ನಗರದ ಹಸಿರು ಪ್ರದೇಶದ ಪ್ರಮಾಣವನ್ನು ಹೆಚ್ಚಿಸಿ ತೋರಿಸಿದಂತಾಗಿದೆ ಎಂದು ಆಕ್ಷೇಪಿಸಿದರು.

[pj-news-ticker]