Trending

ಪುಸ್ತಕ ಓದುವ ಅಭ್ಯಾಸದಿಂದ ಸ್ವಾವಲಂಬನೆ ಸಾಧ್ಯ : ಪ್ರೊ. ಕೇಶವಶರ್ಮ

Spread the love

ಶಿವಮೊಗ್ಗ : ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಸಂಪಾದಿಸುವುದರ ಜೊತೆಗೆ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದು ಹಿರಿಯ ವಿಮರ್ಶಕ ಪ್ರೊ. ಕೇಶವಶರ್ಮ ಹೇಳಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ, ರಾಸೇಯೋ ಘಟಕಗಳು, ಐಕ್ಯೂಎಸಿ ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ಕನಕ ಓದು’ ಒಂದು ದಿನದ ವಿದ್ಯಾರ್ಥಿಗಳ ಪ್ರಬಂಧ ಮಂಡನೆ ಮತ್ತು ವಿಶ್ಲೇಷಣಾ ವಿಚಾರಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಪುಸ್ತಕ ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೃತಕ ಬುದ್ಧಿಮತ್ತೆಯನ್ನೇ ಅವಲಂಬಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ವಿಚಾರಕಮ್ಮಟಗಳು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಕಾರ್ಯಕ್ರಮದ ಸಂಚಾಲಕ ಪ್ರೊ. ಹಾ.ಮ. ನಾಗಾರ್ಜುನ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಸ್ವಾಮಿ ಕೆ. ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ, ಶಂಕರಘಟ್ಟದ ಕನ್ನಡ ಭಾರತಿ ವಿಭಾಗದ ಸಂಶೋಧನಾರ್ಥಿಗಳು ‘ಕನಕ ಓದು’ ವಿಷಯದ ಕುರಿತು ಪ್ರಬಂಧ ಮಂಡಿಸಿದರು.

ಕನಕ ಅಧ್ಯಯನ ಕೇಂದ್ರದ ಅಧಿಕಾರಿ ಶಂಕರನಾರಾಯಣ, ಐಕ್ಯೂಎಸಿ ಸಂಚಾಲಕ ಡಾ. ಕೃಷ್ಣಮೂರ್ತಿ ಜಿ., ಎನ್‌ಎಸ್‌ಎಸ್ ಘಟಕದ ನಿರ್ದೇಶಕ ಡಾ. ಗಿರಿಧರ ಹಾಗೂ ಕಾರ್ಯಕ್ರಮಾಧಿಕಾರಿ ಅರುಣಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸಂವಾದ ನಡೆಸಿದರು.

[pj-news-ticker]