ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದಲೂ ಸಾಧ್ಯವಾಗಿಲ್ಲ. ಇದೀಗ ರಾಷ್ಟ್ರಭಕ್ತರ ಬಳಗ ಆ ದುಸ್ಸಾಹಸಕ್ಕೆ ಕೈಹಾಕುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜವಾಬ್ದಾರಿ ಹಾಗೂ ಹಿಂದುತ್ವದ ಕೆಲಸಕ್ಕಾಗಿ ರೂಪುಗೊಂಡಿದ್ದ ರಾಷ್ಟ್ರಭಕ್ತರ ಬಳಗ ಇದೀಗ ರಾಜಕೀಯಕ್ಕೆ ಪ್ರವೇಶಿಸುತ್ತಿದೆ. ವಿಧಾನಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದು ಕರೆದ ಹಿನ್ನೆಲೆಯಲ್ಲಿ ಪ್ರತಿಭಟನೆಯಾಗಿ ಈ ಬಳಗ ಹುಟ್ಟಿಕೊಂಡಿತ್ತು. ಆದರೆ ಈಗ ಅದನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರಭಕ್ತರ ಬಳಗದಲ್ಲಿ ಬಿಜೆಪಿ ಕಾರ್ಯಕರ್ತರೂ ಇದ್ದಾರೆ. ಅವರ ಭಾವನೆಗಳನ್ನು ಅರಿತುಕೊಳ್ಳದೆ ಈಶ್ವರಪ್ಪ ಮಾತನಾಡುತ್ತಿದ್ದಾರೆ. 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಬಾರದು. ಚುನಾವಣೆಯ ನೆಪದಲ್ಲಿ ಬಿಜೆಪಿ ಭದ್ರ ಬುನಾದಿಯನ್ನು ಅಲುಗಾಡಿಸುವ ಪ್ರಯತ್ನ ಮಾಡಿದರೆ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದರು.
ಇತ್ತೀಚಿನ ರಾಜಕೀಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವೈಚಾರಿಕ ಸಂಘರ್ಷ ನಡೆಯುತ್ತಿದೆ. ಹಿಂದುತ್ವದ ಪರವಾಗಿರುವುದಾಗಿ ಹೇಳಿಕೊಂಡು ಹಿಂದುತ್ವದ ಮೇಲೆಯೇ ಪೆಟ್ಟು ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿ ಸೇರ್ಪಡೆಗೆ ನಾಯಕರಿಂದ ಕರೆ ಬಂದಿದೆ ಎನ್ನುವವರು, ಮತ್ತೊಂದೆಡೆ ತಮ್ಮ ಮಗನನ್ನು ಬಿಜೆಪಿ ವಿರುದ್ಧ ಚುನಾವಣೆಗೆ ನಿಲ್ಲಿಸುವುದಾಗಿ ಹೇಳುತ್ತಿದ್ದಾರೆ. ಈ ನಡೆಯನ್ನು ಕಾರ್ಯಕರ್ತನಾಗಿ ನಾನು ಸಮರ್ಥವಾಗಿ ಎದುರಿಸುತ್ತೇನೆ ಎಂದರು.
ಕೆ.ಎಸ್. ಈಶ್ವರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಹಿರಿಯ ನಾಯಕರು ಕರೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬಿಜೆಪಿಗೆ ಮರಳುವ ನಿರೀಕ್ಷೆಯಲ್ಲಿ ಕಾರ್ಯಕರ್ತರು ಕಾಯುತ್ತಿದ್ದಾರೆ. ಪಕ್ಷಕ್ಕೆ ಅವರು ಮರಳಿದರೆ ತಲೆ ಮೇಲೆ ಹೊತ್ತು ಸ್ವಾಗತಿಸುತ್ತೇವೆ. ನಮಗೆ ಪಕ್ಷದ ನಿಲುವು ಮುಖ್ಯ ಎಂದರು.
2028ರ ಚುನಾವಣೆ ಬಿಜೆಪಿಯ ಚುನಾವಣೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡೋಣ. ಶಿವಮೊಗ್ಗದಲ್ಲಿ ಬಿಜೆಪಿ ಹಾಗೂ ಹಿಂದುತ್ವ ಗಟ್ಟಿಯಾಗಿ ಬೇರೂರಿದೆ ಎಂದರು.
