ಕೋಯಿಕ್ಕೋಡ್: ಚಿನ್ನ ಕಳ್ಳಸಾಗಣೆ ತಡೆಯಲು ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದರೂ, ಕಳ್ಳಸಾಗಣೆದಾರರು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇದೀಗ 8 ತಿಂಗಳ ಮಗುವಿನ ಡೈಪರ್ನಲ್ಲಿ ಚಿನ್ನ ಅಡಗಿಸಿ ಸಾಗಿಸಲು ಯತ್ನಿಸಿರುವ ಘಟನೆ ಕೇರಳದ ಕರಿಪ್ಪುರ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ನಡೆಸಿದ ತಪಾಸಣೆಯಲ್ಲಿ ಒಟ್ಟು ₹1 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಈ ಪೈಕಿ ಸುಮಾರು ಅರ್ಧ ಕೆ.ಜಿ. ತೂಕದ, ₹50 ಲಕ್ಷ ಮೌಲ್ಯದ ಚಿನ್ನವನ್ನು ಮಗುವಿನ ಡೈಪರ್ನಲ್ಲಿ ಅಡಗಿಸಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇಯ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಮಂಗಳವಾರ ತಂದೆಯೊಂದಿಗೆ 8 ತಿಂಗಳ ಮಗು ಕರಿಪ್ಪುರಕ್ಕೆ ಆಗಮಿಸಿತ್ತು. ಕುಟುಂಬವು ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಮೂಲದ್ದು ಎಂದು ತಿಳಿದುಬಂದಿದೆ.
ಜಪ್ತಿ ಮಾಡಿರುವ ಚಿನ್ನವನ್ನು ಎಲ್ಲಿಂದ ತರಲಾಗಿತ್ತು, ಕಳ್ಳಸಾಗಣೆಯ ಹಿಂದೆ ಯಾರು ಇದ್ದಾರೆ ಹಾಗೂ ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಡಿಆರ್ಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯಲ್ಲಿ ಮಗುವಿನ ದೇಹದಲ್ಲಿ ಚಿನ್ನವನ್ನು ಅಡಗಿಸಿ ಕಳ್ಳಸಾಗಣೆ ನಡೆಸಲಾಗಿತ್ತೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
