ಗುಜರಾತ್ : ಭಾವನಗರ ಜಿಲ್ಲೆಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ ನಡೆಯುತ್ತಿದೆ ಎಂದು ಭಾವಿಸಿ ಪರಾರಿಯಾಗಲು ಯತ್ನಿಸಿದ ನಾಲ್ವರು ತೆರೆದ ಕೃಷಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರು ಬದುಕುಳಿದಿದ್ದಾರೆ.
ಸೋಮವಾರ ತಡರಾತ್ರಿ ಕೃಷಿ ಜಮೀನಿನಲ್ಲಿ 11 ಮಂದಿ ಇಸ್ಪೀಟ್ ಆಡುತ್ತಿದ್ದಾಗ ಒಂದು ವಾಹನ ಸ್ಥಳಕ್ಕೆ ಬಂದಿದೆ. ಇದರಿಂದ ಪೊಲೀಸ್ ದಾಳಿ ನಡೆಯುತ್ತಿದೆ ಎಂದು ಭಯಗೊಂಡ ಗುಂಪು ಅಲ್ಲಿಂದ ಓಡಲು ಆರಂಭಿಸಿದೆ. ಕತ್ತಲೆ ಮತ್ತು ಗೊಂದಲದ ನಡುವೆ ನಾಲ್ವರು ತೆರೆದ ಬಾವಿಗೆ ಬಿದ್ದಿದ್ದಾರೆ. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ರಾಹುಲ್ ಪೋಪಟ್ಭಾಯಿ ಚೌಹಾಣ್ (35), ನೀಲೇಶ್ ದಾಭಿ (37) ಮತ್ತು ಅಜಿತ್ಸಿನ್ಹ್ (45) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದಾಗ ಬಾವಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಾವನಗರದ ಸರ್ ಟಿ. ಆಸ್ಪತ್ರೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆಯ ಬಳಿಕ ಮೃತರ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿ, ಪೊಲೀಸ್ ದಾಳಿ ನಡೆದಿತ್ತು ಎಂದು ಆರೋಪಿಸಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಕುಟುಂಬಗಳು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿವೆ.
ಆದರೆ, ವರ್ತೇಜ್ ಪೊಲೀಸರು ಸ್ಥಳದಲ್ಲಿ ಯಾವುದೇ ಪೊಲೀಸ್ ದಾಳಿ ಅಥವಾ ಕಾರ್ಯಾಚರಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಹನದ ಆಗಮನವನ್ನು ದಾಳಿ ಎಂದು ತಪ್ಪಾಗಿ ಭಾವಿಸಿದ್ದರಿಂದ ಗುಂಪಿನಲ್ಲಿ ಭೀತಿ ಉಂಟಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮೂವರು ವ್ಯಕ್ತಿಗಳು ಬಳಿಕ ಅಲ್ಲಿಂದ ತೆರಳಿರಬಹುದು ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತರ ಕುಟುಂಬಸ್ಥರು ಶವಗಳನ್ನು ಸ್ವೀಕರಿಸಲು ನಿರಾಕರಿಸಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.
