Trending

ಪತ್ನಿಯ ಸಾವಿನ ಆಘಾತ: ಅಂತ್ಯಕ್ರಿಯೆ ಸಿದ್ಧತೆ ವೇಳೆ ಪತಿಯೂ ನಿಧನ  

Spread the love

ದಾವಣಗೆರೆ: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವಿನಿಂದ ತೀವ್ರ ದುಃಖಿತರಾಗಿದ್ದ ಪತಿ, ಪತ್ನಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ನಡೆದಿದೆ.

ಮಲ್ಲಜ್ಜ (75) ಹಾಗೂ ಸಿದ್ದಜ್ಜಿ (70) ಮೃತಪಟ್ಟ ದಂಪತಿ. ಕುಟುಂಬ ಮೂಲಗಳ ಪ್ರಕಾರ, ಇಬ್ಬರೂ ಸುಮಾರು 55 ವರ್ಷಗಳ ವೈವಾಹಿಕ ಜೀವನ ನಡೆಸಿದ್ದರು.

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಯೋಸಹಜ ಕಾಯಿಲೆಯಿಂದ ಸಿದ್ದಜ್ಜಿ ನಿಧನರಾಗಿದ್ದರು. ಪತ್ನಿಯ ಸಾವಿನಿಂದ ಮಲ್ಲಜ್ಜ ತೀವ್ರ ದುಃಖಿತರಾಗಿದ್ದು, ರಾತ್ರಿಯಿಡೀ ಕೊರಗಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಕುಟುಂಬಸ್ಥರು ಸಿದ್ದಜ್ಜಿಯವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮಲ್ಲಜ್ಜ ಕೂಡ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತ ದಂಪತಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ. ಒಂದೇ ದಿನದಲ್ಲಿ ದಂಪತಿಯನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

 

[pj-news-ticker]