ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಬಳಿ ಟೋಲ್ ಬಂದ್ ಮಾಡಿ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಮತ್ತೊಮ್ಮೆ ಸಂಪುಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಇಂದು ಬಿಡುಗಡೆ ಆದ ನೂತನ ಸಚಿವರ ಪಟ್ಟಿಯಲ್ಲಿ ಹೆಬ್ಬಾಳ್ಕರ್ ಅವರಿಗೆ ನಿರಾಸೆ ಆಗಿದೆ.
ಇದರಿಂದ ಬೇಸರಗೊಂಡಿರುವ ಅವರ ಅಭಿಮಾನಿಗಳು ಹಿರೇಬಾಗೇವಾಡಿ ಬಳಿಯ ಟೋಲ್ ಗೇಟ್ ಬಳಿ ರಸ್ತೆ ತಡೆದರು. ತಮ್ಮ ನಾಯಕಿಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಅಂತಾ ಘೋಷಣೆ ಕೂಗಿದರು. ಕೈಯಲ್ಲಿ ಹೆಬ್ಬಾಳ್ಕರ್ ಭಾವಚಿತ್ರ ಹಿಡಿದು ಧರಣಿ ಕುಳಿತರು.
ರಾಷ್ಟ್ರೀಯ ಹೆದ್ದಾರಿ ತಡೆದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಪ್ರತಿಭಟನೆ ಮುಂದುವರಿಸುತ್ತಿದ್ದಂತೆ ಪೊಲೀಸರು ಅಲ್ಲಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಮುಂದಾದರು. ಇದರಿಂದ ಪೊಲೀಸರ ಜೊತೆಗೆ ಹೋರಾಟಗಾರರು ವಾಗ್ವಾದಕ್ಕಿಳಿದರು.
ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಅಂತಾ ಮನವೊಲಿಸಿದ ಬಳಿಕ ಹಿರೇಬಾಗೇವಾಡಿ ಗ್ರಾಮದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಮುಂದೆ ಧರಣಿ ಮುಂದುವರೆಸಿದರು. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಧರಣಿ ನಡೆಸಿದ್ದಾರೆ.
