Trending

ಶಿವಮೊಗ್ಗದಲ್ಲಿ ಭೀಕರ ಅಪಘಾತ : ಮರಕ್ಕೆ ಡಿಕ್ಕಿಯಾಗಿ ಕಾರು ಎರಡು ತುಂಡು, ಯುವಕ ಸಾವು

Spread the love

ಶಿವಮೊಗ್ಗ : ನಗರದ ಹೊರವಲಯದ ಹರಿಗೆ ಸಮೀಪ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 21 ವರ್ಷದ ಯುವಕ ಮೃತಪಟ್ಟಿದ್ದು, ಅಪಘಾತಕ್ಕೀಡಾದ ಕಾರಿನ ಮಾಲೀಕತ್ವದ ವಿಚಾರವೂ ಈಗ ಚರ್ಚೆಗೆ ಗ್ರಾಸವಾಗಿದೆ.

ಸೀಗೆಹಟ್ಟಿ ನಿವಾಸಿ ಗುರುರಾಜ್ (21) ಮೃತ ಯುವಕ. ಶಿವಮೊಗ್ಗ–ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಹೋಂಡಾ ಸಿಟಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ.

ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಭಾಗಗಳಾಗಿ ಚಿದ್ರಗೊಂಡಿದೆ. ಪರಿಣಾಮ ಗುರುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತಕ್ಕೀಡಾದ ಕಾರು ನಗರದ ಪ್ರಮುಖ ರಾಜಕೀಯ ಕುಟುಂಬವೊಂದರ ಹೆಸರಿನಲ್ಲಿ ನೋಂದಣಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ವಾಹನ ಗುರುರಾಜ್ ಬಳಿಗೆ ಹೇಗೆ ಬಂದಿತ್ತು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ವ್ಯಕ್ತವಾಗಿದೆ.

ಆದರೆ ಸ್ಥಳೀಯ ಮೂಲಗಳ ಪ್ರಕಾರ, ಗುರುರಾಜ್ ಇತ್ತೀಚೆಗೆ ಈ ಕಾರನ್ನು ಸೆಕೆಂಡ್‌ಹ್ಯಾಂಡ್ ಮೂಲಕ ಖರೀದಿಸಿದ್ದರು ಎನ್ನಲಾಗಿದೆ. ವಾಹನದ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿತ್ತೇ ಅಥವಾ ದಾಖಲೆಗಳು ಹಿಂದಿನ ಮಾಲೀಕರ ಹೆಸರಿನಲ್ಲೇ ಇದ್ದವೆಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಮೃತ ಗುರುರಾಜ್ ಆಟೋ ಹಾಗೂ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ, ವಾಹನದ ವೇಗ, ಮಾಲೀಕತ್ವ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

[pj-news-ticker]