ಜಾತಿ, ಧರ್ಮ, ವರ್ಗ, ಹುದ್ದೆಗಳ ಎಲ್ಲ ಭೇದಗಳನ್ನು ಮೀರಿ ಮಾನವೀಯತೆಯ ಸಂದೇಶ ಸಾರಿದ ಅಪರೂಪದ ಕ್ಷಣಕ್ಕೆ ಭದ್ರಾವತಿ ಸಾಕ್ಷಿಯಾಯಿತು. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದವಿಲ್ಲದೆ, ಪೊಲೀಸರು, ಅಧಿಕಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಒಂದೇ ಸಾಲಿನಲ್ಲಿ ನಿಂತು ರಕ್ತದಾನ ಮಾಡಿ ಹೊರಬರುವಾಗ ಅವರ ಮುಖದಲ್ಲಿ ಕಂಡುಬಂದ ತೃಪ್ತಿ ಮತ್ತು ಧನ್ಯತೆಯ ಭಾವ ಇಡೀ ಶಿಬಿರದ ಯಶಸ್ಸಿಗೆ ಸಾಕ್ಷಿಯಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭದ್ರಾವತಿ ತಾಲೂಕು ಶಾಖೆಯು ಪತ್ರಿಕಾ ದಿನಾಚರಣೆಯ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಸಮಾಜದಲ್ಲಿ ಭಾವೈಕ್ಯತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.
ರಕ್ತಕ್ಕೆ ಜಾತಿ, ಧರ್ಮ, ಲಿಂಗ ಅಥವಾ ಮೇಲು-ಕೀಳು ಎಂಬ ಭೇದವಿಲ್ಲ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳಿಂದಲೇ ರಕ್ತದಾನ ಮಾಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.

ನಂತರ ರಾಜಕೀಯ ಮುಖಂಡರು, ಪೊಲೀಸರು, ಕೆಎಸ್ಆರ್ಪಿ ಸಿಬ್ಬಂದಿ, ಅಧಿಕಾರಿಗಳು, ನೌಕರರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ತಂಡೋಪತಂಡವಾಗಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ನೀಡಿದರು.


ಮಳೆಗಾಲದ ಹಿನ್ನೆಲೆಯಲ್ಲಿ ರಕ್ತದಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮದ ಹಿಂದಿನ ರಾತ್ರಿ ಜರ್ಮನ್ ಶೆಡ್ಗಳನ್ನು ನಿರ್ಮಿಸಿ ಆರು ನೋಂದಣಿ ಕೌಂಟರ್ಗಳನ್ನು ತೆರೆಯಲಾಗಿತ್ತು. ಲಯನ್ಸ್ ಕ್ಲಬ್ ಮೊದಲ ಮಹಡಿಯಲ್ಲಿ ಆರು ರಕ್ತನಿಧಿ ಕೇಂದ್ರಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಆಸ್ಪತ್ರೆಯ ವಾತಾವರಣವನ್ನು ನಿರ್ಮಿಸಲಾಗಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಯೊಂದು ಕೌಂಟರ್ನಲ್ಲಿ ಸೇವೆ ಸಲ್ಲಿಸಿದರೆ, ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಪ್ರಭಾಕರ್ ಬೀರಯ್ಯ ಹಾಗೂ ಜಗದೀಶ್ ಅವರ ಸಮನ್ವಯದಿಂದ ಇಡೀ ಶಿಬಿರ ಶಿಸ್ತುಬದ್ಧವಾಗಿ ನಡೆಯಿತು.
ನೋಂದಣಿ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ದಾನಿಗಳು ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಂಗಕರ್ಮಿ ಅಪರಂಜಿ ಶಿವರಾಜ್ ಅವರ ನಿರೂಪಣೆಯಲ್ಲಿ ಸೌಹಾರ್ದ ಗೀತೆಗಳು, ಜಾನಪದ ನೃತ್ಯಗಳು, ಕಿರು ನಾಟಕಗಳು, ಭಾವಗೀತೆಗಳು ಹಾಗೂ ಹಳೆಯ ಚಿತ್ರಗೀತೆಗಳು ಪ್ರೇಕ್ಷಕರ ಮನಗೆದ್ದವು.
ಗುರು ಆರ್ಟ್ಸ್ ಸಿದ್ಧಪಡಿಸಿದ್ದ ಸೆಲ್ಫಿ ಪಾಯಿಂಟ್ ಮತ್ತು ವೇದಿಕೆಯ ಅಲಂಕಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರೆ, ಸಿದ್ದಲಿಂಗಯ್ಯ ಅವರ ನೇತೃತ್ವದಲ್ಲಿ ನಿರಂತರವಾಗಿ ಉಪಹಾರ, ಊಟ, ಕಾಫಿ ಹಾಗೂ ಟೀ ವ್ಯವಸ್ಥೆ ಮಾಡಲಾಗಿತ್ತು. ರಕ್ತದಾನಿಗಳು ಮತ್ತು ಸಾರ್ವಜನಿಕರು ಸಂತೃಪ್ತಿಯಿಂದ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದ ದೃಶ್ಯಗಳು ಮಾನವೀಯತೆಯ ಹಬ್ಬವನ್ನು ನೆನಪಿಸುತ್ತಿದ್ದವು.
ಇಂದಿನ ಸಾಮಾಜಿಕ ವಾತಾವರಣದಲ್ಲಿ ಇಂತಹ ಸೌಹಾರ್ದ, ಸಾಮರಸ್ಯ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಕಾರ್ಯಕ್ರಮಗಳು ಸಮಾಜಕ್ಕೆ ಸ್ಪೂರ್ತಿದಾಯಕವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
266 ಯೂನಿಟ್ ರಕ್ತ ಸಮರ್ಪಣೆ
ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದರೂ ರಕ್ತಕ್ಕೆ ಪರ್ಯಾಯವಿಲ್ಲ. ಪ್ರಸ್ತುತ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅಗತ್ಯವಿದ್ದು, ರಾಜ್ಯದಲ್ಲಿ ವಾರ್ಷಿಕ ಸುಮಾರು 10 ಲಕ್ಷ ಯೂನಿಟ್ ರಕ್ತದ ಬೇಡಿಕೆ ಇದೆ. ಇದರಲ್ಲಿ ಸುಮಾರು 9.7 ಲಕ್ಷ ಯೂನಿಟ್ ಮಾತ್ರ ಸಂಗ್ರಹವಾಗುತ್ತಿದ್ದು, ಸಂಗ್ರಹಣೆಯಾದ ರಕ್ತದಲ್ಲಿ ಶೇ.5ರಷ್ಟು ನಷ್ಟವಾಗುತ್ತಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ವರದಿ ತಿಳಿಸುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆದ ಈ ಬೃಹತ್ ರಕ್ತದಾನ ಶಿಬಿರದಲ್ಲಿ 266 ಯೂನಿಟ್ ರಕ್ತ ಸಂಗ್ರಹವಾಗಿರುವುದು ಭದ್ರಾವತಿಯ ಇತಿಹಾಸದಲ್ಲೇ ದಾಖಲೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ರಕ್ತ ಸಂಗ್ರಹವಾಗಿರುವ ಶಿಬಿರಗಳು ವಿರಳವಾಗಿವೆ.

ಬೃಹತ್ ರಕ್ತದಾನ ಶಿಬಿರಕ್ಕೆ ಒಂದು ತಿಂಗಳ ಸಿದ್ಧತೆ
ಪತ್ರಿಕಾ ದಿನಾಚರಣೆಯನ್ನು ಸಮಾಜಮುಖಿ ಕಾರ್ಯಕ್ರಮದೊಂದಿಗೆ ಆಚರಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಂಗಾನಾಯ್ಕ ಗೊಂದಿ ಅವರ ನೇತೃತ್ವದಲ್ಲಿ ಜೂನ್ 23ರಂದು ಸಭೆ ನಡೆಯಿತು. ಸುಮಾರು 45ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಶಿಬಿರದ ರೂಪುರೇಷೆಗಳನ್ನು ಸಿದ್ಧಪಡಿಸಿದರು.

ಜುಲೈ 5ರಂದು ಸರ್ಕಾರದ ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿ.ಎಸ್. ಗಣೇಶ್ ಕರಪತ್ರ ಬಿಡುಗಡೆ ಮಾಡಿದರು. ನಗರಸಭೆ ಉಪಾಧ್ಯಕ್ಷ ಬಶೀರ್ ಅಹಮದ್ ‘ರಕ್ತದಾನಿ-ಜೀವದಾನಿ’ ಘೋಷವಾಕ್ಯ ಅನಾವರಣಗೊಳಿಸಿದರೆ, ಡಿವೈಎಸ್ಪಿ ಪ್ರಕಾಶ್ ರಾಥೋಡ್ ರಕ್ತದಾನ ಶಿಬಿರದ ಲೋಗೋ ಬಿಡುಗಡೆ ಮಾಡಿದರು.
ಆಕಾಶವಾಣಿ, ನಗರಸಭೆಯ ಕಸದ ವಾಹನಗಳ ಮೂಲಕ ಪ್ರಚಾರ, ಪತ್ರಿಕೆಗಳ ಜಾಹೀರಾತು, ಸಂಘ-ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮಗಳು ಶಿಬಿರದ ಯಶಸ್ಸಿಗೆ ಪ್ರಮುಖ ಕಾರಣವಾದವು.
ಮೆಗಾನ್ ಆಸ್ಪತ್ರೆಗೆ ಶೇ.25 ರಕ್ತ ಹಂಚಿಕೆ
ಸರ್ಕಾರದ ನಿಯಮಾನುಸಾರ ಖಾಸಗಿ ರಕ್ತನಿಧಿ ಕೇಂದ್ರಗಳು ರಕ್ತದಾನ ಶಿಬಿರಗಳಲ್ಲಿ ಸಂಗ್ರಹಿಸುವ ಒಟ್ಟು ರಕ್ತದಲ್ಲಿ ಶೇ.25ರಷ್ಟು ಯೂನಿಟ್ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಬೇಕು. ಈ ನಿಯಮದ ಅನುಷ್ಠಾನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿಶೇಷ ಒತ್ತು ನೀಡಿದ್ದು, ಶಿಬಿರದಲ್ಲೇ ಸಂಗ್ರಹವಾದ ರಕ್ತದಲ್ಲಿ ಸರ್ಕಾರದ ನಿಯಮದಂತೆ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಶೇ.25ರಷ್ಟು ರಕ್ತದ ಯೂನಿಟ್ಗಳನ್ನು ಹಂಚಿಕೆ ಮಾಡಿಸಲಾಯಿತು. ಇದು ಸರ್ಕಾರಿ ಆಸ್ಪತ್ರೆಗಳ ರಕ್ತದ ಅಗತ್ಯ ಪೂರೈಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
