Trending

ಜು.19ರಂದು ಭದ್ರಾವತಿಯಲ್ಲಿ ಪತ್ರಿಕಾ ದಿನಾಚರಣೆ – ಬೃಹತ್ ರಕ್ತದಾನ ಶಿಬಿರ : ಯಶಸ್ವಿಗೊಳಿಸಲು ಗಂಗಾನಾಯ್ಕ ಗೊಂದಿ ಮನವಿ

Spread the love

ಭದ್ರಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜುಲೈ 19ರಂದು ಪತ್ರಿಕಾ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಗಂಗಾನಾಯ್ಕ ಗೊಂದಿ ತಿಳಿಸಿದರು.

ಗುರುವಾರ ಹಳೇನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪತ್ರಿಕಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದಿಂದ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಬೆಳಿಗ್ಗೆ 8.30ಕ್ಕೆ ರಕ್ತದಾನ ಶಿಬಿರ ಆರಂಭವಾಗಲಿದ್ದು, ವಿವಿಧ ಧರ್ಮಗುರುಗಳು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ಬೆಳಿಗ್ಗೆ 7.30ಕ್ಕೆ ರಂಗಪ್ಪ ವೃತ್ತದಿಂದ ನಮ್ಮ ಭದ್ರಾವತಿ ವೃತ್ತದವರೆಗೆ ರಕ್ತದಾನದ ಜಾಗೃತಿ ಮ್ಯಾರಥಾನ್ ಆಯೋಜಿಸಲಾಗಿದೆ.

ಬೆಳಿಗ್ಗೆ 10.30ಕ್ಕೆ ನಡೆಯುವ ಪತ್ರಿಕಾ ದಿನಾಚರಣೆಯನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ಉದ್ಘಾಟಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬಿಜೆಪಿ ಮುಖಂಡರು, ನ್ಯಾಯವಾದಿ ಮಂಗೋಟೆ ರುದ್ರೇಶ್,

ಸಂಘದ ಜಿಲ್ಲಾಧ್ಯಕ್ಷ ಎಚ್.ಯು ವೈದ್ಯನಾಥ, ರಾಜ್ಯಸಮಿತಿ ಸದಸ್ಯರಾದ ಕೆ.ವಿ ಶಿವಕುಮಾರ್, ಎನ್. ರವಿಕುಮಾರ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ. ಶಂಕರಮೂರ್ತಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರತಿ ವರ್ಷದಂತೆ ಹಿರಿಯ ಪತ್ರಕರ್ತರ ಸೇವೆಯನ್ನು ಗುರುತಿಸಿ ಈ ಬಾರಿ ಹಿರಿಯ ಪತ್ರಕರ್ತ ಅನಂತಕುಮಾರ್ ಅವರನ್ನು ಸನ್ಮಾನಿಸಲಾಗುವುದು. ಜೊತೆಗೆ ಅತ್ಯಧಿಕ ಬಾರಿ ರಕ್ತದಾನ ಮಾಡಿ ಸಮಾಜಸೇವೆಯಲ್ಲಿ ತೊಡಗಿರುವ ಮೂವರು ರಕ್ತದಾನಿಗಳಿಗೆ ವಿಶೇಷ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿವಿಧ ಸಮಿತಿಗಳ ಪ್ರಮುಖರಾದ ಡಿ. ಪ್ರಭಾಕರ ಬೀರಯ್ಯ, ಅಪರಂಜಿ ಶಿವರಾಜ್, ಬಿ. ಸಿದ್ದಬಸಪ್ಪ, ಸಿದ್ದಲಿಂಗಯ್ಯ ಶಿಬಿರದ ಯಶಸ್ವಿಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪ್ರಮುಖರಾದ ಎಸ್.ಆರ್ ಜಗದೀಶ್, ಡಿ. ಶಂಕರಮೂರ್ತಿ, ಚನ್ನಪ್ಪ, ನಿರಂಜನ್, ಬಿ. ಗುರು, ಲಕ್ಷ್ಮೀಕಾಂತ್, ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

[pj-news-ticker]