ದಾವಣಗೆರೆ: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಲ್ಲಿನ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿತು.
ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಆದೇಶವನ್ನು ಜುಲೈ 13ಕ್ಕೆ ಕಾಯ್ದಿರಿಸಿದರು.
ಸಂತ್ರಸ್ತ ಬಾಲಕನ ತಾಯಿ ಪರ ವಕೀಲರು ಹಾಗೂ ಸ್ವಾಮೀಜಿ ಪರ ವಕೀಲರು ಸೋಮವಾರ ವಾದ- ಪ್ರತಿವಾದ ಮಂಡನೆ ಮಾಡಿದರು. ಸರ್ಕಾರಿ ಅಭಿಯೋಜಕರು ಶನಿವಾರ ವಾದ ಮಂಡಿಸಿ ಜಾಮೀನು ಮಂಜೂರು ಮಾಡದಂತೆ ಕೋರಿದ್ದರು.
16 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಸ್ವಾಮೀಜಿ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಇದು ರದ್ದಾಗಿತ್ತು.
