Trending

ಅರಣ್ಯ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ : ಬೇಳೂರು ಗೋಪಾಲಕೃಷ್ಣ ವಿಶ್ವಾಸ

Spread the love

ಸಾಗರ: ”ನನಗೆ ಸಚಿವ ಸ್ಥಾನ ನೀಡುವ ಶೇ. 100 ಭರವಸೆ ಇದೆ. ಸಚಿವ ಸ್ಥಾನಕ್ಕಾಗಿ ಹೈಮಾಂಡ್, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಮಲೆನಾಡು ಭಾಗಕ್ಕೆ ಅರಣ್ಯ ಖಾತೆ ನೀಡಲು ಆಗ್ರಹಿಸಿದ್ದು, ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ನೀಡಿದ್ದಾರೆ.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ಜೂ. 23 ಅಥವಾ 24 ರಂದು ನಡೆಯಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ನಾವು16 ಜನರಿದ್ದು ಎರಡು ಮತ ಮಾತ್ರ ಕಡಿಮೆ ಆಗುತ್ತದೆ. ಅದು ಸಹ ನಮ್ಮ ಬಳಿ ಇದೆ. ಅಡ್ಡಮತದಾನ ಆಗದಂತೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ಗೆ ಹೋಗುವುದರಲ್ಲಿ ತಪ್ಪೇನಿದೆ. ರೆಸಾರ್ಟ್‌ನಲ್ಲಿ ರಾಜಕೀಯ ಸ್ಥಿತಿಗತಿ, ಕ್ಷೇತ್ರದ ಅಭಿವೃದ್ದಿ ಕುರಿತು ಮಾತುಕತೆ ಮಾಡಲು ಸಹ ಅನುಕೂಲವಾಗುತ್ತದೆ ಎಂದು ಹೇಳಿದರು.

ಗೃಹಲಕ್ಷ್ಮೀ, ಗೃಹಜ್ಯೋತಿ ಪರಿಷ್ಕರಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ತಲುಪಬೇಕು. ಸತ್ತವರು ಸಹ ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ನಡೆಯುತ್ತಿದೆ. ಸರ್ಕಾರದ ಯಾವುದೇ ಗ್ಯಾರಂಟಿ ರದ್ದುಪಡಿಸುವುದಿಲ್ಲ ಎಂದು ಹೇಳಿದರು.

ವಿದ್ಯುತ್ ಕಂಪನಿಗಳ ಖಾಸಗೀಕರಣದ ಕುರಿತು ಮೆಸ್ಕಾಂ ನೌಕರರು ಮನವಿ ನೀಡಿದ್ದು ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಗಳು, ಇಂಧನ ಸಚಿವರ ಜೊತೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಖಾಸಗೀಕರಣ ಬೇಡ ಎಂದು ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಧುಮಾಲತಿ, ಸೈಯದ್ ಜಾಕೀರ್, ಅನ್ವರ್ ಭಾಷಾ, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.

 

[pj-news-ticker]