ಬೆಂಗಳೂರು : ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಯು ಸರ್ಕಾರಕ್ಕೆ ದೊಡ್ಡ ಆತಂಕವನ್ನುಂಟುಮಾಡಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ತಡೆಗಟ್ಟಲು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಈ ಸಂಬಂಧ ಪಬ್, ಬಾರ್ಗಳು ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದು, ಮದ್ಯ ಸರಬರಾಜು ಮಾಡುವ ಎಲ್ಲಾ ಸಂಸ್ಥೆಗಳು ಪ್ರವೇಶ ದ್ವಾರದಲ್ಲಿ ಮತ್ತು ಮದ್ಯವನ್ನು ನೀಡುವ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಆದೇಶಿಸಿದ್ದಾರೆ.
ಹೀಗಾಗಿ ಇನ್ಮುಂದೆ ಐಡಿ ಕಾರ್ಡ್ ಇಲ್ಲದಿದ್ದರೆ ಬಾರ್, ಪಬ್ಗಳಿಗೆ ಪ್ರವೇಶವಿಲ್ಲ.
ಅಪ್ರಾಪ್ತ ವಯಸ್ಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ತಡೆಯಲು ಮತ್ತು ಅವರಿಗೆ ಮದ್ಯ ಸರಬರಾಜು ಮಾಡುವುದನ್ನು ನಿಷೇಧಿಸಲು ಬೆಂಗಳೂರಿನ ಎಲ್ಲಾ ಪಬ್ಗಳು, ಬ್ರೆವರೀಸ್, ಬಾರ್ಗಳು, ಕ್ಲಬ್ಗಳು, ಲಾಂಜ್ಗಳು, ರೆಸ್ಟೋರೆಂಟ್ಗಳು ಹಾಗೂ ಮದ್ಯ ಸರಬರಾಜು ಮಾಡುವ ಇತರ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಯಸ್ಸಿನ ಪರಿಶೀಲನೆ ಕಡ್ಡಾಯ
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಿಯಾಂಕ್ ಖರ್ಗೆ, ಎಲ್ಲ ಪಬ್ಗಳು, ಬ್ರೂವರೀಸ್, ಬಾರ್, ಕ್ಲಬ್ಗಳು, ಲಾಂಜ್, ರೆಸ್ಟೋರೆಂಟ್ ಮತ್ತು ಮದ್ಯ ಮಾರಾಟ ಮಾಡುವ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ನೋಟಿಸ್ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
