ಪಾಟ್ನಾ: ಬಿಹಾರ ಸರ್ಕಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರಿಗೆ ನೀಡಲಾಗಿದ್ದ Z-ಪ್ಲಸ್ ಭದ್ರತೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಕ್ರಮಕ್ಕೆ ಅಸಮಾಧಾನಗೊಂಡಿರುವ ಇಬ್ಬರು ನಾಯಕರು, ಸರ್ಕಾರದಿಂದ ನಿಯೋಜಿಸಲಾದ ಹೊಸ ಭದ್ರತಾ ಸಿಬ್ಬಂದಿಯನ್ನು ತಮ್ಮ ನಿವಾಸದಿಂದ ಹಿಂದಕ್ಕೆ ಕಳುಹಿಸಿದ್ದಾರೆ.
ಬಿಹಾರ ಸರ್ಕಾರವು ವಿಐಪಿಗಳಿಗೆ ನೀಡಲಾಗುತ್ತಿರುವ ಭದ್ರತೆಯ ಮರುಪರಿಶೀಲನೆ ನಡೆಸಿದ ಬಳಿಕ, ಲಾಲು ಯಾದವ್ ಹಾಗೂ ರಾಬ್ರಿ ದೇವಿಯವರ Z-ಪ್ಲಸ್ ಭದ್ರತೆಯನ್ನು ರದ್ದುಪಡಿಸಿ, ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ (BSAP) ಮೂಲಕ ಹೊಸ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಆದರೆ ಈ ಹೊಸ ಭದ್ರತಾ ವ್ಯವಸ್ಥೆಯನ್ನು ಅವರು ತಿರಸ್ಕರಿಸಿದ್ದಾರೆ.
ಸರ್ಕಾರದ ಹೊಸ ನಿಯಮದ ಪ್ರಕಾರ ಲಾಲೂ ದಂಪತಿಗೆ ಬಿಎಸ್ಎಪಿ ಪಡೆಯ 2 ರಿಂದ 8 ಗೃಹ ರಕ್ಷಕರು, ಪಟ್ನಾ ಜಿಲ್ಲಾ ಪಡೆಯ ಇಬ್ಬರು ಅಂಗರಕ್ಷಕರು ಹಾಗೂ ಒಂದು ಪೈಲಟ್ ಮತ್ತು ಬುಲೆಟ್ಪ್ರೂಫ್ ಕಾರನ್ನು ಮಾತ್ರ ನೀಡಲಾಗಿತ್ತು. ಮತ್ತೊಂದೆಡೆ, ಲಾಲೂ ಯಾದವ್ ಅವರ ಪುತ್ರ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಕೂಡ ತಮಗೆ ನೀಡಲಾಗಿದ್ದ ‘ವೈ’ (Y) ಕೆಟಗರಿ ಭದ್ರತೆಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಲಾಲೂ ಅವರ ಹಿರಿಯ ಮಗ ತೇಜ್ ಪ್ರತಾಪ್ ಅವರಿಗೆ ನೀಡಲಾಗಿದ್ದ ವೈ ಕೆಟಗರಿ ಭದ್ರತೆಯನ್ನೂ ಸರ್ಕಾರ ಹಿಂಪಡೆದಿದೆ.
ಇನ್ನು ಭದ್ರತೆ ಕಡಿತಗೊಳಿಸಿರುವ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಆಕ್ರೋಶ ಹೊರಹಾಕಿರುವ ಲಾಲೂ ಯಾದವ್ ಪುತ್ರಿ ರೋಹಿಣಿ ಆಚಾರ್ಯ, “ನನ್ನ ಪೋಷಕರು ಮತ್ತು ಕುಟುಂಬಕ್ಕೆ ಹಾನಿ ಮಾಡುವ ದುರುದ್ದೇಶದಿಂದಲೇ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಇಷ್ಟೊಂದು ಭದ್ರತೆ ಕಡಿತಗೊಳಿಸಿದ ಮೇಲೆ ಹೆಸರಿಗಷ್ಟೇ ಇರುವ ಈ ಭದ್ರತೆಯನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿಯೇ ರಾಬ್ರಿ ದೇವಿ ಅವರು ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ನಿರ್ಧರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಈ ಬೆಳವಣಿಗೆಯ ನಡುವೆ, ಪಾಟ್ನಾದ 10, ಸರ್ಕ್ಯುಲರ್ ರೋಡ್ನಲ್ಲಿರುವ ಅವರ ನಿವಾಸದ ಹೊರಗೆ ಆರ್ಜೆಡಿ (RJD) ಕಾರ್ಯಕರ್ತರು ಕೈಯಲ್ಲಿ ಕೋಲುಗಳನ್ನು ಹಿಡಿದು ಕಾವಲು ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.
