Trending

‘ನಮ್ಮ ಪೋಸ್ಟ್‌ಗಳನ್ನು ಅಳಿಸಬಹುದು, ಹೋರಾಟವಲ್ಲ’ – ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಆಕ್ರೋಶ

Spread the love

ನವದೆಹಲಿ: ನೀಟ್ ಪರೀಕ್ಷೆ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪದ ಮೇಲೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಬದಲು ಕೇಂದ್ರ ಸರಕಾರವು ನಮ್ಮ ಸಂಘಟನೆಯ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೇಲೆ ಗಮನಹರಿಸುತ್ತಿದೆ ಎಂದು ಆನ್‌ಲೈನ್ ಚಳವಳಿ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕಿಡಿಕಾರಿದ್ದಾರೆ.

ಶನಿವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ದೀಪ್ಕೆ ”ನನ್ನ ಸ್ನೇಹಿತರೇ, ಇದು ದೀರ್ಘ ಹೋರಾಟ. ನಾವು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ, ಆದರೆ ಈ ವ್ಯಕ್ತಿಗಳು ಎಷ್ಟು ನಾಚಿಕೆಯಿಲ್ಲದವರೆಂದರೆ, ಕ್ರಮ ತೆಗೆದುಕೊಳ್ಳುವ ಬದಲು, ಅವರು ನಮ್ಮ ಖಾತೆಗಳನ್ನು ಹ್ಯಾಕ್ ಮಾಡುವುದು ಮತ್ತು ನಮ್ಮ ಪೋಸ್ಟ್‌ಗಳನ್ನು ಅಳಿಸುವತ್ತ ಗಮನಹರಿಸಿದ್ದಾರೆ.

ನೀವು ನಮ್ಮ ಪೋಸ್ಟ್‌ಗಳನ್ನು ಅಳಿಸಲು ಸಾಧ್ಯವಾಗಬಹುದು, ಆದರೆ ನಮ್ಮನ್ನು ಈ ಸ್ಥಳದಿಂದ ಅಳಿಸಲು ಸಾಧ್ಯವಿಲ್ಲ” ಎಂದು ಜನಸಮೂಹವನ್ನುದ್ದೇಶಿಸಿ ಕಿಡಿ ಕಾರಿದರು.

”ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಯಲಿದೆ. ಅಧಿಕಾರಿಗಳು ಇನ್ನೂ ಎಷ್ಟು ವಿದ್ಯಾರ್ಥಿಗಳ ಆತ್ಮಹತ್ಯೆಗಾಗಿ ಕಾಯುತ್ತಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ಚಳವಳಿ ನಿಲ್ಲುವುದಿಲ್ಲ” ಎಂದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ಸುಧಾರಕ ಮತ್ತು ಪರಿಸರವಾದಿ ಸೋನಮ್ ವಾಂಗ್ಚುಕ್ ಭಾಗಿಯಾಗಿ ಮಾತನಾಡಿದರು. “ನನಗೆ ಪ್ರತಿಭಟನೆ ಇಷ್ಟವಿಲ್ಲ ಆದರೆ ನಾವು ನ್ಯಾಯಕ್ಕಾಗಿ ಅದನ್ನು ಮಾಡಬೇಕು.ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು” ಎಂದು ಹೇಳಿದರು.

ಭಾರೀ ಭದ್ರತೆಯ ನಡುವೆ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೇರಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಮತ್ತು ಭಾರತ ವಿದ್ಯಾರ್ಥಿ ಒಕ್ಕೂಟ (SFI)ದ ಹಲವಾರು ಸದಸ್ಯರು ಭಾಗವಹಿಸಿದ್ದಾರೆ. ಜೂನ್ 23 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಮತ್ತೊಂದು ಪ್ರತಿಭಟನೆಯನ್ನು ನಡೆಸಲು ಸಿಜೆಪಿ ಮುಂದಾಗಿದೆ.

[pj-news-ticker]