Trending

ಭಾರತದಲ್ಲಿ ಕಾಗದದ ಬದಲು ಪಾಲಿಮಾರ್‌ ನೋಟು ಚಾಲ್ತಿಗೆ ಚಿಂತನೆ : ಆರ್‌ ಬಿಐ

Spread the love

ನವದೆಹಲಿ: ಭಾರತದಲ್ಲಿಯೂ ಪಾಲಿಮಾರ್‌ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುವ ಪ್ರಸ್ತಾಪವನ್ನು ಪರಿಗಣಿಸಲಾಗುವುದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಶುಕ್ರವಾರ ಘೋಷಿಸಿದ್ದಾರೆ.

ಪಾಲಿಮಾರ್‌ (ಪ್ಲಾಸ್ಟಿಕ್)‌ ನೋಟುಗಳ ಬಿಡುಗಡೆ ಪ್ರಸ್ತಾಪ ಪ್ರಸ್ತುತ ಪ್ರಾಥಮಿಕ ಹಂತದಲ್ಲಿರುವುದಾಗಿ ಗವರ್ನರ್‌ ತಿಳಿಸಿದ್ದಾರೆ. ಕಾಗದದ ಕರೆನ್ಸಿ ಬಳಕೆಯಲ್ಲಿ ಭಾರಿ ಏರಿಕೆಯಾಗುತ್ತಿರುವುದರಿಂದ, ಕೇಂದ್ರ ಬ್ಯಾಂಕ್ ಪ್ಲಾಸ್ಟಿಕ್ ಕರೆನ್ಸಿ ನೋಟುಗಳನ್ನು ಮುದ್ರಿಸುವ ಪ್ರಸ್ತಾಪವನ್ನು ಒಂದು ದಶಕದ ಹಿಂದೆಯೇ ಪ್ರಸ್ತಾಪಿಸಿದ್ದು, ಇದೀಗ ಮತ್ತೆ ಗಂಭೀರ ಚಿಂತನೆ ನಡೆಸಲು ಕಾಲ ಕೂಡಿಬಂದಿರುವುದಾಗಿ ವರದಿ ತಿಳಿಸಿದೆ.

ಕಾಗದದ ನೋಟುಗಳ ಮುದ್ರಣ ವೆಚ್ಚ ಗಗನಕ್ಕೇರುತ್ತಿದ್ದು, ಜತೆಗೆ ಕಾಗದದ ನೋಟುಗಳ ಬೇಡಿಕೆ ಹೆಚ್ಚಳವಾಗುತ್ತಿರುವ ಪರಿಣಾಮ ಪಾಲಿಮಾರ್‌ ಕರೆನ್ಸಿ ನೋಟು ಬಿಡುಗಡೆ ಮಾಡುವ ಪ್ರಸ್ತಾಪ ಮತ್ತೆ ಮುನ್ನಲೆಗೆ ಬರುವಂತಾಗಿದೆ ಎಂದು ಆರ್‌ ಬಿಐ ತಿಳಿಸಿದೆ.

ಆರ್‌ಬಿಐ ಅಂಕಿ-ಅಂಶಗಳ ಪ್ರಕಾರ, ಕರೆನ್ಸಿ ಮುದ್ರಣದ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. 2025ರಲ್ಲಿ ನೋಟು ಮುದ್ರಣ ವೆಚ್ಚವು ಗರಿಷ್ಠ 6,372 ಕೋಟಿ ರುಪಾಯಿಗೆ ತಲುಪಿತ್ತು. ಆದರೆ 2026ರಲ್ಲಿ ಇದು 4,875 ಕೋಟಿ ರುಪಾಯಿಗೆ ಇಳಿದಿದೆ. ಇದಕ್ಕೂ ಮುನ್ನ 2017ರಲ್ಲಿ ನೋಟು ಅಮಾನ್ಯೀಕರಣ ಮತ್ತು ಹೊಸ ನೋಟುಗಳ ಬಿಡುಗಡೆಯಿಂದಾಗಿ ಈ ವೆಚ್ಚ ದಾಖಲೆಯ 7,965 ಕೋಟಿ ರುಪಾಯಿಗೆ ಏರಿತ್ತು.

2014ರಲ್ಲಿ, ಭೌಗೋಳಿಕ ಮತ್ತು ಹವಾಮಾನ ವೈವಿಧ್ಯತೆಗಾಗಿ ಆಯ್ಕೆ ಮಾಡಲಾದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ 10 ರೂ. ಮುಖಬೆಲೆಯ ಒಂದು ಬಿಲಿಯನ್ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಾಗುವುದು ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತ್ತು. ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಮತ್ತು ಭುವನೇಶ್ವರ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದ ಕಾರಣ ಪಾಲಿಮಾರ್‌ ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು.

ಆಸ್ಟ್ರೇಲಿಯಾ, ಕೆನಡಾ, ಯುನೈಟೆಡ್‌ ಕಿಂಗ್‌ ಡಮ್‌, ನ್ಯೂಜಿಲ್ಯಾಂಡ್‌, ವಿಯೆಟ್ನಾಂ, ರೊಮೇನಿಯಾ, ಬ್ರೂನೈ, ಪಪುವಾ ನ್ಯೂ ಗಿನಿಯಾ ಸೇರಿದಂತೆ ಜಗತ್ತಿನ 60 ದೇಶಗಳಲ್ಲಿ ಪಾಲಿಮಾರ್‌ ಕರೆನ್ಸಿ ಚಾಲ್ತಿಯಲ್ಲಿದೆ.

[pj-news-ticker]