ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ರಚನೆಯಾಗುವಾಗ ಅಥವಾ ಖಾತೆ ಹಂಚಿಕೆ ನಡೆಯುವ ಸಂದರ್ಭಗಳಲ್ಲಿ ಸದಾ ಹೆಚ್ಚು ಚರ್ಚೆಗೆ ಗ್ರಾಸವಾಗುವ ಇಲಾಖೆಯೆಂದರೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ.
ರಾಜ್ಯ ರಾಜಧಾನಿಯ ಅಭಿವೃದ್ಧಿ, ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಹಾಗೂ ಪ್ರಭಾವಶಾಲಿ ಸಂಸ್ಥೆಗಳ ಮೇಲಿನ ನಿಯಂತ್ರಣ ಈ ಇಲಾಖೆಯಲ್ಲಿರುವುದರಿಂದ, ಸಚಿವ ಸಂಪುಟದಲ್ಲಿ ಈ ಖಾತೆಗೆ ವಿಶೇಷ ಮಹತ್ವವಿದೆ.
ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆಳವಣಿಗೆ ರಾಜಕೀಯವಾಗಿ ಸಂಚಲನ ಮೂಡಿಸಿದೆ.
ಇದೇ ಖಾತೆ ಬೇಕೆನ್ನಲು ಪ್ರಮುಖ ಕಾರಣಗಳು
- ಸರ್ಕಾರದ ವಿಶೇಷ ಅನುದಾನ: ಕರ್ನಾಟಕ ಬಜೆಟ್ ಪ್ರಕಾರ, ಬೆಂಗಳೂರಿನ ಅಭಿವೃದ್ಧಿಗಾಗಿ ವಾರ್ಷಿಕವಾಗಿ 7,000 ಕೋಟಿಗೂ ಹೆಚ್ಚಿನ ವಿಶೇಷ ಅನುದಾನವನ್ನು ನೀಡಲಾಗುತ್ತದೆ.
- ಈ ಇಲಾಖೆಯ ಸಚಿವರು ನಗರದ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಪ್ರಭಾವಶಾಲಿ ಸ್ವಾಯತ್ತ ಸಂಸ್ಥೆಗಳ ಮೇಲೆ ನೇರ ನಿಯಂತ್ರಣ ಹೊಂದಿರುತ್ತಾರೆ.
- ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು 5 ಪಾಲಿಕೆಗಳು: ಇಡೀ ನಗರದ ಆಡಳಿತ ಮತ್ತು ನಾಗರಿಕ ಸೌಲಭ್ಯಗಳ ಮೇಲ್ವಿಚಾರಣೆ.
- ಬಿಡಿಎ (BDA) ಮತ್ತು ಬಿಎಂಆರ್ಡಿಎ (BMRDA): ನಗರದ ಭೂ ನಿಯಂತ್ರಣ, ಹೊಸ ಲೇಔಟ್ಗಳ ರಚನೆ ಮತ್ತು ವಾಣಿಜ್ಯ ಯೋಜನೆಗಳ ಅನುಮೋದನೆ.
- ಬಿಡಬ್ಲ್ಯೂಎಸ್ಎಸ್ಬಿ (BWSSB): ಕೋಟ್ಯಂತರ ಜನರಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿ.
ಸಾವಿರಾರು ಕೋಟಿ ಅನುದಾನದ ಇಲಾಖೆ
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಲೇ ಬಂದಿದೆ. ರಸ್ತೆ ಅಭಿವೃದ್ಧಿ, ಮೆಟ್ರೋ ವಿಸ್ತರಣೆ, ವೈಟ್ಟಾಪಿಂಗ್, ಸುರಂಗ ರಸ್ತೆ ಹಾಗೂ ಬ್ರ್ಯಾಂಡ್ ಬೆಂಗಳೂರು ಯೋಜನೆಗಳಿಗೆ ವಿಶೇಷ ಪ್ಯಾಕೇಜ್ಗಳನ್ನು ಘೋಷಿಸಲಾಗಿದೆ.
- ವಾರ್ಷಿಕವಾಗಿ ₹7,000 ಕೋಟಿಗೂ ಅಧಿಕ ವಿಶೇಷ ಅನುದಾನ.
- 2019-21ರ ಅವಧಿಯಲ್ಲಿ ನಗರೋತ್ಥಾನ ಯೋಜನೆಗೆ ಸುಮಾರು ₹8,300 ಕೋಟಿ ಮೀಸಲು.
- 2022-23ರಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹8,409 ಕೋಟಿ.
- ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸುರಂಗ ರಸ್ತೆ ಮತ್ತು ವೈಟ್ಟಾಪಿಂಗ್ ಕಾಮಗಾರಿಗಳಿಗೆ ₹12,000 ಕೋಟಿ.
- 2026-27ನೇ ಸಾಲಿಗೆ ಬೆಂಗಳೂರಿಗೆ ₹7,000 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ.
ಬೆಂಗಳೂರು ಶಾಸಕರಿಗೆ ಅಚ್ಚುಮೆಚ್ಚಿನ ಖಾತೆ
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಾಮಾನ್ಯವಾಗಿ ಬೆಂಗಳೂರು ಭಾಗದ ಶಾಸಕರ ಮೊದಲ ಆಯ್ಕೆಯಾಗಿರುತ್ತದೆ. ಕಾರಣ, ಈ ಇಲಾಖೆಯ ಕಾರ್ಯಕ್ಷೇತ್ರ ಬಹುತೇಕ ರಾಜಧಾನಿ ನಗರಕ್ಕೆ ಸೀಮಿತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಪ್ರವಾಸದ ಅವಶ್ಯಕತೆ ಕಡಿಮೆ ಇರುವುದರಿಂದ, ಸಚಿವರು ತಮ್ಮ ಕ್ಷೇತ್ರದಲ್ಲೇ ಹೆಚ್ಚಿನ ಸಮಯ ಕಳೆಯುವ ಜೊತೆಗೆ ಇಲಾಖೆಯನ್ನೂ ನಿರ್ವಹಿಸಬಹುದು. ಇದರ ಮೂಲಕ ಸ್ಥಳೀಯ ರಾಜಕೀಯ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಒಟ್ಟಾರೆ, ರಾಜಕೀಯ ಪ್ರಭಾವ, ಆರ್ಥಿಕ ಶಕ್ತಿ, ಸಾವಿರಾರು ಕೋಟಿ ರೂಪಾಯಿ ಯೋಜನೆಗಳು ಹಾಗೂ ನಗರದ ಭವಿಷ್ಯವನ್ನು ರೂಪಿಸುವ ಅವಕಾಶ – ಈ ನಾಲ್ಕು ಅಂಶಗಳೇ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಕರ್ನಾಟಕ ಸಚಿವ ಸಂಪುಟದ ಅತ್ಯಂತ ಬೇಡಿಕೆಯ ಖಾತೆಯನ್ನಾಗಿ ಮಾಡಿವೆ.
