Trending

ಬೀದರ್ ಪಶು ವೈದ್ಯಕೀಯ ವಿವಿಯ 45 ಕೋಟಿ ರೂ. ಹಗರಣ : ಮಾಜಿ ಉಪಕುಲಪತಿ ಸೇರಿ 6 ಮಂದಿ ಅರೆಸ್ಟ್‌

Spread the love

ಬೀದರ್: ಬೀದರ್ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಬಹುಕೋಟಿ ಹಗರಣದಲ್ಲಿ ಮಾಜಿ ಉಪಕುಲಪತಿ ಸೇರಿ ಆರು ಜನರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಎಚ್.ಡಿ. ನಾರಾಯಣಸ್ವಾಮಿ, 2017-18ರ ಅವಧಿಯಲ್ಲಿ ವಿವಿಯ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೋಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಬಂಧಿತರು.

ಏನಿದು ಪ್ರಕರಣ?

2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಸಾಮಗ್ರಿ ಖರೀದಿಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂ.ಗೂ ಅಧಿಕ ಹಣವನ್ನು ಲೂಟಿ ಮಾಡಿದ್ದರು. ಬಳಿಕ 2021ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ತನಿಖೆಯನ್ನು ತೀವ್ರಗೊಳಿಸಿ ಕಳೆದ 2025ರ ಸೆಪ್ಟೆಂಬರ್ 10ರಂದು ಏಕಕಾಲಕ್ಕೆ ರಾಜ್ಯದ 25ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಈ ಹಗರಣದಲ್ಲಿ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಎಂಟರ್‌ಪ್ರೈಸಸ್ ಮಾಲೀಕರು ಶಾಮೀಲಾಗಿ ಯಾವುದೇ ಸಾಮಗ್ರಿ ಖರೀದಿಸದೆಯೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿರುವುದು ಸಾಬೀತಾಗಿದೆ. ಇದೀಗ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ಸದ್ಯ ಬಂಧಿತ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬಿಕರ್, ಐಜಿಪಿ ಎ.ಎಸ್.ಸುಬ್ರಹ್ಮಣ್ಯೇಶ್ವರರಾವ್, ಎಸ್ಪಿಗಳಾದ ಬದ್ರಿನಾಥ, ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಬೀದ‌ರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ, ಸಂತೋಷ ರಾಠೋಡ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

[pj-news-ticker]