ಭೋಪಾಲ್: ಪಾರ್ಟಿ ಮಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡ ಸ್ನೇಹಿತನೇ, ತನ್ನ ಆಪ್ತ ಸ್ನೇಹಿತನಾಗಿರುವ ಪೊಲೀಸ್ ಕಾನ್ಸ್ಟೆಬಲ್ ನನ್ನು ಗುಂಡಿಕ್ಕಿ ಕೊಂದಿರುವ ಭೀಕರ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಮೃತರನ್ನು ಪೊಲೀಸ್ ಕಾನ್ಸ್ಟೆಬಲ್ ರಾಕೇಶ್ ಕುಮಾರ್ ಪಟೇಲ್ ಎಂದು ಗುರುತಿಸಲಾಗಿದೆ. ಆರೋಪಿ ರಾಕೇಶ್ ಮಿಶ್ರಾ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧ ಆರಂಭಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ.
ಆರೋಪಿ ರಾಕೇಶ್ ಮಿಶ್ರಾ ಭಾನುವಾರ ತಡರಾತ್ರಿ ಪಾರ್ಟಿ ಇದೆ ಎಂದು ಹೇಳಿ ಕಾನ್ಸ್ಟೆಬಲ್ ರಾಕೇಶ್ ಕುಮಾರ್ ಪಟೇಲ್ ನನ್ನು ತನ್ನ ಮನೆಗೆ ಆಹ್ವಾನಿಸಿದ್ದಾನೆ. ಸ್ನೇಹಿತನ ಮಾತು ನಂಬಿ ಪಟೇಲ್ ಆತನ ಮನೆಗೆ ಹೋಗಿದ್ದರು. ಆದರೆ, ಅಲ್ಲಿ ಇಬ್ಬರ ನಡುವೆ ಏನು ನಡೆಯಿತೋ ಗೊತ್ತಿಲ್ಲ, ಆರೋಪಿ ಮಿಶ್ರಾ, ಕಾನ್ಸ್ಟೆಬಲ್ ಪಟೇಲ್ ಅವರ ತಲೆಗೆ ಗುಂಡಿಕ್ಕಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಟೇಲ್ ನನ್ನು ಆರೋಪಿಯ ಸಹೋದರ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ದುರಾದೃಷ್ಟವಶಾತ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಪಟೇಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇತ್ತ ಘಟನೆ ನಡೆದ ಬೆನ್ನಲ್ಲೇ ಆರೋಪಿ ರಾಕೇಶ್ ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತ ರಾಕೇಶ್ ಕುಮಾರ್ ಪಟೇಲ್ ಇತ್ತೀಚೆಗಷ್ಟೇ ರೇವಾ ಪೊಲೀಸ್ ಲೈನ್ಸ್ನಿಂದ ಮೈಹರ್ ಜಿಲ್ಲೆಯ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ರೇವಾ ಪೊಲೀಸ್ ವರಿಷ್ಠಾಧಿಕಾರಿ ಗುರುಕರನ್ ಸಿಂಗ್ “ಫೋರೆನ್ಸಿಕ್ ತಂಡವನ್ನು ಸ್ಥಳಕ್ಕೆ ಕರೆಯಿಸಿ ತನಿಖೆ ನಡೆಸಲಾಗುತ್ತಿದೆ. ಸಾಧ್ಯವಿರುವ ಎಲ್ಲಾ ಆಯಾಮಗಳಿಂದಲೂ ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಯ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ,” ಎಂದು ತಿಳಿಸಿದ್ದಾರೆ.
