ಬೆಂಗಳೂರು: ದುಡಿಯುವ ಸಾಮರ್ಥ್ಯವಿರುವ ಪತಿಯು ತಾನು ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪತ್ನಿಯು ಉದ್ಯೋಗದಲ್ಲಿದ್ದು ಸಂಬಳ ಪಡೆಯುತ್ತಿದ್ದರೂ ಸಹ, ವಿವಾಹದ ನಂತರ ಪತಿಯ ಮನೆಯಲ್ಲಿ ಆಕೆ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಪತಿ ಮತ್ತು ಪತ್ನಿ ಇಬ್ಬರೂ ಈ ಮೊದಲೇ ವಿಚ್ಛೇದನ ಪಡೆದವರಾಗಿದ್ದು, 2021ರಲ್ಲಿ ಮರು ವಿವಾಹವಾಗಿದ್ದರು. ಆದರೆ, ದಾಂಪತ್ಯದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದಾಗಿ 2022ರಲ್ಲಿ ಪತ್ನಿಯು ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತಿಯ ವಾದವೇನಿತ್ತು? ತಾವು 2023ರಲ್ಲಿ ಕೆಲಸ ಕಳೆದುಕೊಂಡಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ ಎಂದು ಪತಿ ವಾದಿಸಿದ್ದರು. ತಂದೆ-ತಾಯಿಯ ಪಿಂಚಣಿ ಹಾಗೂ ಹಳೆಯ ಉಳಿತಾಯದ ಹಣದಲ್ಲಿ ಜೀವನ ಸಾಗಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಪತ್ನಿಯು ಪದವೀಧರೆಯಾಗಿದ್ದು, ಸ್ವಂತ ಆದಾಯ ಹೊಂದಿರುವುದರಿಂದ ಆಕೆಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು.
