ಸಾಗರ: ಬೇಸೂರು ಅಣು ವಿದ್ಯುತ್ ಸ್ಥಾವರ ಖಂಡಿಸಿ ಗುರುವಾರ ಜನ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆದಿದ್ದು, ಸರ್ಕಾರ ಲಿಖಿತವಾಗಿ ಪ್ರಸ್ತಾವನೆ ಇಲ್ಲ ಎಂದು ಘೋಷಿಸುವ ತನಕ ಈ ಹೋರಾಟ ನಿಲ್ಲುವುದಿಲ್ಲ ಎಂದು ಬೇಸೂರು ಗ್ರಾಮದ ಜನ ಹೋರಾಟ ವೇದಿಕೆ ಘೋಷಿಸಿದೆ.
ನಗರದ ಶಿವಪ್ಪನಾಯಕ ವೃತ್ತದಿಂದ ಹೊರಟ ವೇದಿಕೆ ನೇತೃತ್ವದ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆ ನಂತರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಗೆ ಹಿರಿಯ ಸಮಾಜವಾದಿ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಬೇಸೂರು ಅಣು ವಿದ್ಯುತ್ ಸ್ಥಾವರ ಯಾವುದೇ ಕಾರಣಕ್ಕೂ ಬೇಸೂರು ಮಾತ್ರವಲ್ಲದೆ ನಮ್ಮ ರಾಜ್ಯದಲ್ಲಿಯೇ ಬೇಡ. ನಾಡಿಗೆ ಬೆಳಕು ನೀಡಲು ಮೂರು ಬಾರಿ ನಿರಾಶ್ರಿತರಾದ ಜನರ ಮೇಲೆ ಮತ್ತೆ ಮತ್ತೆ ಹೊಸ ಹೊಸ ಯೋಜನೆ ಹೇರುವುದನ್ನು ಸಹಿಸುವುದಿಲ್ಲ. ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ. ಯಾವುದೇ ಕಾರಣಕ್ಕೂ ಅಣು ಸ್ಥಾವರವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಅಣು ವಿದ್ಯುತ್ ಸ್ಥಾವರವಾದರೆ ಕೇವಲ ಬೇಸೂರಿಗೆ ಮಾತ್ರ ತೊಂದರೆ ಎನ್ನುವ ಮನೋಭಾವದಿಂದ ಜನರು ಹೊರಗೆ ಬರಬೇಕು. ಮಲೆನಾಡು ಪ್ರದೇಶದಲ್ಲಿ ಈ ಯೋಜನೆ ಸಾಧುವಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಜನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಮಾತನಾಡಿ, ಯಾವುದೇ ಕಾರಣಕ್ಕೂ ಬೇಸೂರು ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಬೇಡ ಎಂದು ಸರಣಿ ಸಭೆ ನಡೆಸಿ ಹೋರಾಟ ರೂಪಿಸಲಾಗಿದೆ. ಯೋಜನೆ ಕೈಬಿಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಅನ್ಸರ್ ಸಖಾಫಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್, ದಿನೇಶ್ ಶಿರವಾಳ, ಅಖಿಲೇಶ್ ಚಿಪ್ಳಿ, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ರವಿಕುಮಾರ್ ಸಿಗಂದೂರು, ಪೋಷಿಣಿ ಬೇಸೂರು ಡಾ. ಜೀವನ್, ರೋಹಿತ್ ಇನ್ನಿತರರು ಮಾತನಾಡಿದರು. ಶಿವಾನಂದ ಕುಗ್ವೆ, ವ.ಶಂ.ರಾಮಚಂದ್ರ ಭಟ್, ಹೊನಗೋಡು ರತ್ನಾಕರ್, ರವಿಕುಮಾರ್ ಎಚ್.ಎಂ., ಎಂ.ವಿ.ಪ್ರತಿಭಾ, ಸಫಿಯಾ ಅಬೂಬಕರ್, ಸುವರ್ಣ ಟೀಕಪ್ಪ, ಚೇತನರಾಜ ಕಣ್ಣೂರು, ದೇವೇಂದ್ರಪ್ಪ, ಸೀತಾರಾಂ ಕುರುವರಿ, ಕಲಸೆ ಚಂದ್ರಪ್ಪ, ಶತಾಯುಷಿ ಬಂಗಾರಮ್ಮ ಇನ್ನಿತರರು ಇದ್ದರು.
