ಶಿವಮೊಗ್ಗ : ಬೇಸಿಗೆ ರಜೆಯ ಸಂಭ್ರಮದಲ್ಲಿದ್ದ ಒಂಬತ್ತು ವರ್ಷದ ಬಾಲಕಿ ದುರ್ಘಟನೆಯೊಂದರಲ್ಲಿ ಪ್ರಾಣ ಕಳೆದುಕೊಂಡ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯನ್ನು ಕಳೆಯಲು ಸುಮಾರು ಒಂದು ವಾರದ ಹಿಂದೆ ಆಕೆ ತನ್ನ ಚಿಕ್ಕಮ್ಮನ ಮನೆಗೆ ಲಕ್ಕಿನಕೊಪ್ಪಕ್ಕೆ ಬಂದಿದ್ದಳು. ಮನೆಯವರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದ ಆಕೆ, ಏಪ್ರಿಲ್ 20ರಂದು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.
ಕೋಣೆಯೊಳಗೆ ಹಳೆಯ ಪಂಚೆಯನ್ನು ಬಳಸಿಕೊಂಡು ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಪಂಚೆಯ ಕುಣಿಕೆ ಕುತ್ತಿಗೆಗೆ ಬಿಗಿದುಕೊಂಡಿದೆ. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸದಿದ್ದು, ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬಹಳ ಹೊತ್ತಾದರೂ ಮಗು ಹೊರಗೆ ಬರದಿರುವುದನ್ನು ಗಮನಿಸಿದ ಮನೆಯವರು ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಬಾಲಕಿ ಅಚೇತನ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ ಆಕೆಯನ್ನು ಉಳಿಸಲು ಸಾಧ್ಯವಾಗಲಿಲ್ಲ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
