Trending

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ವೈದ್ಯರ ಬದಲು ಶಸ್ತ್ರಚಿಕಿತ್ಸೆ ನಡೆಸಿದ ಸೆಕ್ಯೂರಿಟಿ ಗಾರ್ಡ್

Spread the love

ಪಾಟ್ನಾ: ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಹಾ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ (ಭದ್ರತಾ ಸಿಬ್ಬಂದಿ) ಒಬ್ಬ ರೋಗಿಯ ಗಾಯಕ್ಕೆ ಹೊಲಿಗೆ ಹಾಕುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಹೊರವಲಯದಲ್ಲಿ ಟೆಂಪೋ ಮತ್ತು ಪಿಕಪ್ ವ್ಯಾನ್ ಢಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಪಿಕಪ್ ಚಾಲಕ ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಬಗಹಾ ಉಪ-ವಿಭಾಗೀಯ ಆಸ್ಪತ್ರೆಗೆ ಕರೆತಂದಿದ್ದಾರೆ.

ಸಾಮಾನ್ಯವಾಗಿ ಆಸ್ಪತ್ರೆಯ ‘ಆಪರೇಷನ್ ಥಿಯೇಟರ್’ (OT) ಒಳಗೆ ವೈದ್ಯರು ಅಥವಾ ನುರಿತ ನರ್ಸ್‌ಗಳಿಗೆ ಮಾತ್ರ ಪ್ರವೇಶವಿರುತ್ತದೆ. ಆದರೆ ವೈರಲ್ ವಿಡಿಯೋದಲ್ಲಿ, ಯಾವುದೇ ವೈದ್ಯಕೀಯ ತರಬೇತಿ ಇಲ್ಲದ ಸೆಕ್ಯೂರಿಟಿ ಗಾರ್ಡ್ ರೋಗಿಯ ಗಾಯಗಳಿಗೆ ಹೊಲಿಗೆ ಹಾಕುತ್ತಿರುವುದು ಕಂಡುಬಂದಿದೆ.

ಗಾಯಾಳುಗಳಾದ ವಾಸೀಂ ಅಖ್ತರ್ ಮತ್ತು ಸುರೇಂದ್ರ ಪಾಸಿ ಈ ಬಗ್ಗೆ ಪ್ರತಿಕ್ರಿಯಿಸಿ, “ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಸಹ ಸಿಬ್ಬಂದಿ ಕೊರತೆಯ ನೆಪವೊಡ್ಡಿ ಸೆಕ್ಯೂರಿಟಿ ಗಾರ್ಡ್‌ನಿಂದ ಚಿಕಿತ್ಸೆ ಕೊಡಿಸಲಾಗಿದೆ. ಇದು ನಮ್ಮ ಪ್ರಾಣದ ಜೊತೆಗಿನ ಆಟ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗಾಯಾಳುವಿಗೆ ಚಿಕಿತ್ಸೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಉಪಾಧೀಕ್ಷಕ ಡಾ. ಅಶೋಕ್ ಕುಮಾರ್ ತಿವಾರಿ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಸಹಾಯಕರು ಮತ್ತು ಡ್ರೆಸ್ಸರ್‌ಗಳ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಇವೆ. ಅಪಘಾತದ ದಿನ ಏಕಕಾಲದಲ್ಲಿ ಹಲವು ಗಾಯಾಳುಗಳು ಬಂದಿದ್ದರಿಂದ. ಒಬ್ಬ ರೋಗಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಹಾಗಾಗಿ ವೈದ್ಯರ ಮೇಲ್ವಿಚಾರಣೆಯಲ್ಲೇ ಸೆಕ್ಯೂರಿಟಿ ಗಾರ್ಡ್ ನೆರವು ಪಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಯ ನಿಯಮದಂತೆ ನುರಿತ ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಪ್ರವೇಶವಿರುತ್ತದೆ. ತರಬೇತಿ ಪಡೆಯದ ವ್ಯಕ್ತಿಯಿಂದ ಚಿಕಿತ್ಸೆ ಪಡೆಯುವುದು ರೋಗಿಯ ಜೀವಕ್ಕೆ ಅಪಾಯಕಾರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಮತ್ತು ಸಿಬ್ಬಂದಿ ನೇಮಕಾತಿಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದೆ.

[pj-news-ticker]