ಶಿರಸಿ: ಶಿರಸಿಯಲ್ಲಿ ನಡೆದ ಆಯುರ್ವೇದ ವೈದ್ಯನ ಹತ್ಯೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥ ಪಾಂಡುರಂಗ ನಾಯ್ಕ (70) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ, ₹50,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಎಚ್.ಬಿ ಕಾಲೋನಿಯಲ್ಲಿ ಡಾ. ರಮೇಶ್ ಎಫ್. ಕಲ್ಗುಟ್ಕರ್ (51) ಹತ್ಯೆಯಾಗಿರುವುದು ಭಾನುವಾರ ಸಂಜೆ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಶಂಕಿತನನ್ನು ಬಂಧಿಸಿದ್ದಾರೆ.
ಡಾ. ರಮೇಶ್ ಅವರು ಶಿರಸಿ ನಗರದಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದರು. ಐದು ತಿಂಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದು, ಪತ್ನಿಯ ತಂಗಿಯೊಂದಿಗೆ ಮರುಮದುವೆ ನಿಗದಿಯಾಗಿತ್ತು. ಮದುವೆಗಾಗಿ ಮನೆಯಲ್ಲೇ ಚಿನ್ನಾಭರಣ ಮತ್ತು ಹಣ ಸಂಗ್ರಹಿಸಿದ್ದರು.
ಈ ವಿಷಯ ತಿಳಿದಿದ್ದ ಆರೋಪಿ, ಪರಿಚಯದ ನೆಪದಲ್ಲಿ ಮನೆಗೆ ಭೇಟಿ ನೀಡಿ, ಶನಿವಾರ ರಾತ್ರಿ ವೈದ್ಯರ ಜೊತೆಗೇ ಉಳಿದಿದ್ದಾನೆ. ಭಾನುವಾರ ಬೆಳಗಿನಜಾವ ಆಭರಣ ಮತ್ತು ಹಣ ದೋಚಿ, ವೈದ್ಯನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಡಿಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಾಗಿ ಹುಡುಕಾಟ ನಡೆಸಲಾಗಿತ್ತು. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಆರೋಪಿ ಮೂಲತಃ ಶಿವಮೊಗ್ಗ ಜಿಲ್ಲೆಯವನಾಗಿದ್ದು, ಆಧಾರ್ ಕಾರ್ಡ್ನಲ್ಲಿ ಯಲ್ಲಾಪುರ ವಿಳಾಸ ಹೊಂದಿದ್ದಾನೆ. ಇತ್ತೀಚೆಗೆ ಶಿರಸಿಯ ಶಾಂತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಪರಿಚಯದ ದುರುಪಯೋಗ ಹಾಗೂ ಅತಿಯಾದ ದುರಾಸೆಯೇ ಈ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
