ಭದ್ರಾವತಿ : ಪತ್ರಕರ್ತರ ಸೇವೆ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಅವರು ಸಲ್ಲಿಸುತ್ತಿರುವ ಸೇವೆ ಶಾಶ್ವತವಾಗಿ ಉಳಿಯಲಿದೆ ಎಂದು ನಗರದ ಹಿರಿಯ ವೈದ್ಯ ಡಾ. ನರೇಂದ್ರ ಭಟ್ ಅಭಿಪ್ರಾಯಪಟ್ಟರು.
ಹಳೇನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಪ್ರಮುಖ ಅಂಗವಾಗಿದ್ದು, ಅವರ ಆರೋಗ್ಯ ಕಾಳಜಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪತ್ರಕರ್ತರು ಆರ್ಥಿಕವಾಗಿ ಕೆಲವೊಮ್ಮೆ ಸಂಕಷ್ಟ ಎದುರಿಸುತ್ತಿದ್ದರೂ, ಸದಾ ವೃತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ವೃತ್ತಿಯ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ವಹಿಸಿದ್ದರು. ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಲಕ್ಷಿತಾ ಹಾಗೂ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ತಾಲೂಕು ಘಟಕದ ಉಪಾಧ್ಯಕ್ಷ ಜಿ. ಸುಭಾಷ್ರಾವ್ ನಿರೂಪಿಸಿ, ಕಾರ್ಯದರ್ಶಿ ಅನಂತಕುಮಾರ್ ವಂದಿಸಿದರು.
ಶಿಬಿರದಲ್ಲಿ ಡಾ. ಲಕ್ಷಿತಾ ನೇತೃತ್ವದಲ್ಲಿ ಪೇಷಂಟ್ ಕೇರ್ ಮ್ಯಾನೇಜರ್ ಆರ್. ರಂಜಿತಾ, ಡಿ. ವೇದಾವತಿ, ಮನೀಶಾ, ವಿಂಧ್ಯಾ ಮತ್ತು ಅಕ್ಷಿತಾ ಅವರ ತಂಡದಿಂದ ಯಶಸ್ವಿಯಾಗಿ ಕಣ್ಣುಗಳ ತಪಾಸಣೆ ನಡೆಸಲಾಯಿತು.
