Trending

ದೇಶಕ್ಕೆ ಮೋದಿ ಹೇಗೆ ಅಪಶಕುನವೋ ಹಾಗೆಯೇ ತೀರ್ಥಹಳ್ಳಿಗೆ ಜ್ಞಾನೇಂದ್ರ ಅಪಶಕುನ : ಕಿಮ್ಮನೆ ರತ್ನಾಕರ್

Spread the love

ತೀರ್ಥಹಳ್ಳಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ತೈಲ ಬೆಲೆ ಹೆಚ್ಚಳದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದೇ ಸಮಸ್ಯೆ ಕಾಂಗ್ರೆಸ್ ಆಡಳಿತದಲ್ಲಿ ಆಗಿದ್ದರೆ ಬಿಜೆಪಿ ಈ ಹೊತ್ತಿಗೆ ಭಾರತ್ ಬಂದ್‌ಗೆ ಕರೆ ನೀಡುತ್ತಿತ್ತು,” ಎಂದು ಟೀಕಿಸಿದರು.

ಭಾರತವನ್ನು ನಾವು ‘ಭಾರತಾಂಬೆ’ ಎಂದು ಕರೆಯುತ್ತೇವೆ, ಆದರೆ ಮೋದಿ ಇಸ್ರೇಲ್ ದೇಶವನ್ನು ‘ಫಾದರ್ ಆಫ್ ಲ್ಯಾಂಡ್’ ಎಂದು ಕರೆಯುತ್ತಾರೆ. ನಮ್ಮನ್ನು ಆಳುತ್ತಿರುವುದು ಮೋದಿಯೋ ಅಥವಾ ಟ್ರಂಪ್ ಎಂಬುದು ತಿಳಿಯುತ್ತಿಲ್ಲ,” ಎಂದು ವ್ಯಂಗ್ಯವಾಡಿದರು.

ಮೂರು ತಿಂಗಳಿಗೆ ಆಗುವಷ್ಟು ತೈಲ ದಾಸ್ತಾನು ಇದೆ ಎಂದು ಹೇಳಿ ಈಗಲೇ ಬೆಲೆ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವುದು ಸರಿಯಲ್ಲ ಎಂದರು.

ಶಾಸಕ ಅರಗ ಜ್ಞಾನೇಂದ್ರ ಅವರ ವಿರುದ್ಧ ಆಸ್ತಿ ವಿಚಾರವಾಗಿ ಪ್ರಶ್ನೆ ಎತ್ತಿದ ಕಿಮ್ಮನೆ, “ಅವರು ಅಸೆಂಬ್ಲಿಯಲ್ಲಿ ಹೀರೊ ತರಹ ಮಾತನಾಡುತ್ತಾರೆ, ಆದರೆ ಇಲ್ಲಿ ಮರಳು ದಂಧೆ ನಡೆದರೂ ಕೇಳುವುದಿಲ್ಲ. ಮೊದಲ ಬಾರಿ ಅಸೆಂಬ್ಲಿಗೆ ಹೋದಾಗ ಅವರ ಕಾರು ನೋಡಿ ಅವರಿಗೆ ಅಷ್ಟೊಂದು ಸಂಬಳ ಬರುತ್ತದೆಯೇ ಎಂದುಕೊಂಡಿದ್ದೆ, ಆದರೆ ಸಿಗುತ್ತಿದ್ದುದು ಕೇವಲ 21 ಸಾವಿರ ರೂ. ಇಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂತು? ಅವರು ಅಡಿಕೆ ಸೇರಿದಂತೆ ಹಲವು ವ್ಯಾಪಾರಗಳನ್ನು ಮಾಡುತ್ತಿರುವ ದೊಡ್ಡ ವ್ಯಾಪಾರಸ್ಥ,” ಎಂದು ಲೇವಡಿ ಮಾಡಿದರು.

ರಾಮೇಶ್ವರ ದೇವಸ್ಥಾನಕ್ಕೆ ಜ್ಞಾನೇಂದ್ರ ಮಾಡಿದ್ದೇನು? ಈಗಾಗಲೇ ಮಾರಿಕಾಂಬಾ ದೇವಸ್ಥಾನ ಬಿಜೆಪಿ ಕಚೇರಿ ಆಗಿದೆ, ಮ್ಯಾಮ್ಕೋಸ್ ಬಿಜೆಪಿ ಕಚೇರಿ ಆಗಿದೆ. ಇದಕ್ಕೆಲ್ಲಾ ಜ್ಞಾನೇಂದ್ರ ಅಧ್ಯಕ್ಷ. ಈಗ ರಾಮೇಶ್ವರ ದೇವಸ್ಥಾನ ಕೂಡ ಬಿಜೆಪಿ ಕಚೇರಿ ಮಾಡಿಕೊಳ್ಳಬೇಕು ಎಂದು ಕೊಂಡಿದ್ದಾರೆ. ದೇಶಕ್ಕೆ ಮೋದಿ ಹೇಗೆ ಅಪಶಕುನನೋ ಹಾಗೆ ತೀರ್ಥಹಳ್ಳಿಗೆ ಜ್ಞಾನೇಂದ್ರ ಅಪಶಕುನ ಎಂದು ವಾಗ್ದಾಳಿ ನಡೆಸಿದರು.

ಮಾರ್ಚ್ 20ಕ್ಕೆ ಬೃಹತ್ ಪ್ರತಿಭಟನೆ
ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಸ್ಥಳೀಯ ಸಮಸ್ಯೆಗಳ ವಿರುದ್ಧ ಮಾರ್ಚ್ 20 ರಂದು ತೀರ್ಥಹಳ್ಳಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಸ್ತೂರು ಮಂಜುನಾಥ್, ಕಂಡಿಲ್ ರಾಘವೇಂದ್ರ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಅಮರನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ, ಅಶ್ವಲ್ ಗೌಡ,   ಗೀತಾ ರಮೇಶ್, ಶಬನಮ್, ಸುಶೀಲ ಶೆಟ್ಟಿ, ಗೀತಾ ರಾಘವೇಂದ್ರ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.

[pj-news-ticker]