Trending

ವಿಐಎಸ್‌ಎಲ್‌ಗೆ ಗಣಿ ಮಂಜೂರಿಗೆ ಮತ್ತೆ ಅಡೆತಡೆ – ಅರಣ್ಯ ಇಲಾಖೆಯಿಂದ ಸ್ಪಷ್ಟ ನಿರಾಕರಣೆ

Spread the love

ಭದ್ರಾವತಿ : ವಿಐಎಸ್‌ಎಲ್‌ (VISL) ಕಾರ್ಖಾನೆಗೆ ಗಣಿ ಮಂಜೂರು ಮಾಡುವ ವಿಚಾರದಲ್ಲಿ ಮತ್ತೆ ಹಿನ್ನಡೆಯಾಗಿದೆ. ಕೆಲ ತಿಂಗಳ ಹಿಂದೆ ಬಳ್ಳಾರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ನೀಡಿದ್ದ ನಿರಾಕರಣಾ ವರದಿಯನ್ನು ಇದೀಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಸಹ ಸಮರ್ಥಿಸಿದ್ದಾರೆ. ಇದರೊಂದಿಗೆ ಗಣಿ ಮಂಜೂರು ಪ್ರಕ್ರಿಯೆಗೆ ಮತ್ತೊಮ್ಮೆ ಬ್ರೇಕ್ ಬಿದ್ದಂತಾಗಿದೆ.

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಐಎಸ್‌ಎಲ್‌ ಪುನರುಜ್ಜೀವನಕ್ಕೆ ₹5,000 ಕೋಟಿ ಹೂಡಿಕೆ ಮಾಡುವುದಾಗಿ ಹಲವು ಬಾರಿ ಭರವಸೆ ನೀಡಿದ್ದರು. ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂಬ ನಿರೀಕ್ಷೆ ಮೂಡಿದ್ದ ಸಮಯದಲ್ಲೇ ಈ ಬೆಳವಣಿಗೆ ನಿರಾಸೆ ತಂದಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ರಾಮನಮಲೆ ಬ್ಲಾಕ್‌ನಲ್ಲಿರುವ 60.70 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ವಿಐಎಸ್‌ಎಲ್‌ಗೆ ನೀಡುವ ಪ್ರಸ್ತಾವನೆ ಇತ್ತು. ಆದರೆ ಈ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾದರೆ ಸುಮಾರು 29,400 ಮರಗಳು ನಾಶವಾಗುವ ಸಾಧ್ಯತೆ ಇದೆ. ಜೊತೆಗೆ ಅಪರೂಪದ ಪ್ರಾಣಿ-ಪಕ್ಷಿಗಳ ವಾಸಸ್ಥಾನಕ್ಕೂ ಗಂಭೀರ ಧಕ್ಕೆಯಾಗಬಹುದು ಎಂದು ಅರಣ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಡಿಸಿಎಫ್‌ ನೀಡಿದ ನಿರಾಕರಣೆಯನ್ನು ಸಿಸಿಎಫ್‌ ಸಹ ಮಾನ್ಯಗೊಳಿಸಿರುವುದು, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂಬ ಸಂದೇಶ ನೀಡಿದಂತಾಗಿದೆ. ಆದರೆ ಮತ್ತೊಂದೆಡೆ, ವಿಐಎಸ್‌ಎಲ್‌ ಪುನರುಜ್ಜೀವನದ ಯೋಜನೆಗಳಿಗೆ ಇದು ದೊಡ್ಡ ಸವಾಲಾಗಿರುವುದು ಸ್ಪಷ್ಟವಾಗಿದೆ.

ಈ ಬೆಳವಣಿಗೆಯ ಬಳಿಕ ಸರ್ಕಾರ ಮುಂದಿನ ಕ್ರಮ ಏನು ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ಸೆಳೆದಿದೆ.

[pj-news-ticker]