ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದಂತೆ ಹೇಳಲಾಗಿದ್ದ 400 ಕೋಟಿ ರೂಪಾಯಿ ಹಣ ದರೋಡೆ ಪ್ರಕರಣಕ್ಕೆ ಇದೀಗ ರೋಚಕ ತಿರುವು ದೊರೆತಿದೆ. ಹಣ ದರೋಡೆಯಾಗಿರುವ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷ್ಯ ಲಭ್ಯವಾಗಿಲ್ಲ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಕರ್ನಾಟಕ–ಗೋವಾ ಗಡಿಯಲ್ಲಿ ಅಕ್ಟೋಬರ್ 25ರಂದು ಭಾರೀ ಮೊತ್ತದ ಹಣ ದರೋಡೆ ನಡೆದಿದೆ ಎಂಬ ದೂರು ಆಧರಿಸಿ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿತ್ತು. ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೈನರ್ಗಳನ್ನು ದರೋಡೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿನಲ್ಲಿ ತಿಳಿಸಿದ್ದರು.
ಎಸ್ಐಟಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೂ, Chorla Ghat ಸಮೀಪ ಇಷ್ಟೊಂದು ದೊಡ್ಡ ಮೊತ್ತದ ಹಣ ದರೋಡೆಯಾಗಿರುವ ಬಗ್ಗೆ ಯಾವುದೇ ಕುರುಹು ಸಿಗಲಿಲ್ಲ. ದೂರಿದಾರರ ಹೇಳಿಕೆ ಹಾಗೂ ದರೋಡೆ ನಡೆದ ಸ್ಥಳದ ವಿವರಗಳ ನಡುವೆ ಸಹ ಯಾವುದೇ ಹೊಂದಾಣಿಕೆ ಕಂಡುಬಂದಿಲ್ಲ. ಜೊತೆಗೆ ಕರೆ ವಿವರಗಳನ್ನು ಪರಿಶೀಲಿಸಿದರೂ ದೂರುಗೆ ಬಲವಾದ ಆಧಾರ ಸಿಕ್ಕಿಲ್ಲ.
ಹೀಗಾಗಿ ಚೋರ್ಲಾಘಾಟ್ನಲ್ಲಿ 400 ಕೋಟಿ ದರೋಡೆ ನಡೆದಿದೆ ಎಂಬ ಮಾಹಿತಿ ಸುಳ್ಳು ಎಂದು ಎಸ್ಐಟಿ ದೃಢ ನಿರ್ಧಾರಕ್ಕೆ ಬಂದಿದೆ.
ಈ ಪ್ರಕರಣ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಾಕ್ಷಿಗಳ ಕೊರತೆಯಿಂದ ಬಂಧಿತರಾಗಿರುವ ಆರೋಪಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರ ಮಧ್ಯೆ, ಎಸ್ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿರುವ ಸಂದೀಪ್ ದತ್ತಾ ಪಾಟೀಲ್, ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿ, ಮರು ತನಿಖೆ ನಡೆಸುವಂತೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.
