ಶಿವಮೊಗ್ಗ : ಶಿವಮೊಗ್ಗ ಸೈಬರ್ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಆನ್ಲೈನ್ ವಂಚನೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ಶರತ್ ಕುಮಾರ್ ಕೆ. ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ವಿವಿಧ ಬ್ಯಾಂಕ್ಗಳ 18 ಪಾಸ್ಬುಕ್, 7 ಚೆಕ್ಬುಕ್, 25 ಎಟಿಎಂ ಕಾರ್ಡ್ಗಳು, ಎರಡು ಮೊಬೈಲ್ ಫೋನ್ಗಳು ಹಾಗೂ ಎರಡು ಕ್ಯೂಆರ್ ಕೋಡ್ ಸ್ಕ್ಯಾನರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ತನಿಖೆಯಲ್ಲಿ, ಆರೋಪಿ ಆನ್ಲೈನ್ ವಂಚಕರ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬಳಕೆ ಆಗದಂತೆ ಇಡಲಾಗಿದ್ದ 19 ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡು ಒಟ್ಟು ₹11.48 ಕೋಟಿ ಮೊತ್ತದ ಹಣದ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ಖಾತೆಗಳ ವಿವರಗಳನ್ನು ವಿವಿಧ ವ್ಯಕ್ತಿಗಳಿಂದ ಪಡೆದು, ಖುದ್ದು ಶರತ್ ಕುಮಾರ್ ಕೆ. ಅವುಗಳನ್ನು ನಿಯಂತ್ರಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಸೈಬರ್ ವಂಚನೆಗಳಿಂದ ಬಂದ ಹಣವನ್ನು ಈ ಖಾತೆಗಳಿಗೆ ಜಮೆ ಮಾಡಿ, ನಂತರ ಅದನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ವಂಚನಾ ಜಾಲವನ್ನು ನಿರ್ವಹಿಸುತ್ತಿದ್ದನು.
ಬಂಧಿತ ಆರೋಪಿ ಬಳಿಯಿದ್ದ ಬ್ಯಾಂಕ್ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಹಣಕಾಸು ವಹಿವಾಟಿನ ವಿವರಗಳು, ಈ ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಸೈಬರ್ ಅಪರಾಧ ಜಾಲವಿರುವುದನ್ನು ಸೂಚಿಸುತ್ತವೆ. ಈ ಸಂಬಂಧ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳು ಹಾಗೂ ವಂಚನಾ ಜಾಲದ ಪ್ರಮುಖ ವ್ಯಕ್ತಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
