ಭದ್ರಾವತಿ: ತಹಶೀಲ್ದಾರ್ ಪರಸಪ್ಪ ಕುರುಬರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಆಡಳಿತಕ್ಕೆ ಅಡ್ಡಿ ಪಡಿಸುತ್ತಿರುವ ಗ್ರಾಮ ಆಡಳಿತಧಿಕಾರಿ ಆರ್.ಜಿ. ಅಭಿಷೇಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಸೇವೆಯಿಂದ ವಜಗೊಳಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮ ಆಡಳಿತಧಿಕಾರಿ ಆರ್.ಜಿ. ಅಭಿಷೇಕ್ ಅವರು, ತಹಶೀಲ್ದಾರ್ ಪರಸಪ್ಪ ಕುರುಬರ ಮೇಲೆ ಕೆಲಸದ ಒತ್ತಡ ಹೇರಿ ಪದೇಪದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಸಿದ್ದಾಪುರ ಚಾನೆಲ್ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿ ಪತ್ರ ಬರೆದಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ವರ್ತನೆ ಸಾರ್ವಜನಿಕ ಸೇವೆಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಅವರು ಆರೋಪಿಸಿದರು.
ಇದೇ ವೇಳೆ, ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಆಡಳಿತಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ, ಗ್ರಾಮ ಆಡಳಿತಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೀಶ್ ನಾಯಕ ಅವರು ಯಾವುದೇ ಮುನ್ಸೂಚನೆ ನೀಡದೆ ಸಭೆ ನಡೆಸಿರುವುದು ಸಹ ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂಬಂಧ ಯೋಗೀಶ್ ನಾಯಕರ ವಿರುದ್ಧವೂ ಕ್ರಮ ಜರಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮುರುಗೇಶ್, ಸೈಯದ್ ರಿಯಾಜ್, ಕುಬೇರಪ್ಪ, ನದೀಮ್, ಭಾಷಾ ನಾಗರಾಜರಾವ್, ಅಂಬೋರೆ, ಜನ್ನಾಪುರ ಮಂಜುನಾಥ್, ಜಿಂಕ್ ಲೈನ್ ಮಣಿ, ಸುರೇಶ್, ಶಶಿಕುಮಾರ್, ಸಂತೋಷ್, ಕುಪೇಂದ್ರ ಎಸ್., ಶಿವಪ್ಪ ಭಾಷಾ ಸೇರಿದಂತೆ ಹಲವರು ಭಾಗವಹಿಸಿದ್ದರು.
