ಸಾಗರ : ತಾಲ್ಲೂಕಿನ ಉಳ್ಳೂರು ಸಮೀಪ ಕ್ಯಾಂಟರ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾಗರದ ಅಕ್ಷಯ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರನ್ನು ಸಾಗರದ ಅಕ್ಷಯ ಬ್ಯಾಂಕ್ ಉದ್ಯೋಗಿ ಪವಿತ್ರಾ ಸಿ. (25) ಹಾಗೂ ಆಕೆಯ ಸ್ನೇಹಿತ ವೀರೇಶ್ ಟಿ.ಎಸ್. (25) ಎಂದು ಗುರುತಿಸಲಾಗಿದೆ. ಪವಿತ್ರಾ ಸೊರಬ ತಾಲ್ಲೂಕಿನ ಮಳಲಗದ್ದೆ ಗ್ರಾಮದ ಚನ್ನಬಸವಯ್ಯ ಪುತ್ರಿ ಆಗಿದ್ದು, ವೀರೇಶ್ ಸಾಗರ ತಾಲ್ಲೂಕಿನ ತಡಗಳಲೆ ಗ್ರಾಮದವರಾಗಿದ್ದಾರೆ.
ಪವಿತ್ರಾ ಸಾಗರದಲ್ಲಿ ಪಿಜಿಯಲ್ಲಿ ವಾಸವಿದ್ದು, ಸ್ನೇಹಿತ ವೀರೇಶ್ ಜೊತೆ ಮಾರುತಿ ಆಲ್ಟೋ ಕಾರಿನಲ್ಲಿ ಆನಂದಪುರಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಸಾಗರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಉಳ್ಳೂರು–ಮುಂಡಿಗೆಮಟ್ಟೆ ಬಳಿ ರಾತ್ರಿ ಸುಮಾರು 10.30ರ ಸುಮಾರಿಗೆ ಎದುರಿನಿಂದ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಆನಂದಪುರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ನಜ್ಜುಗುಜ್ಜಾಗಿ ಕಾರಿನೊಳಗೆ ಸಿಲುಕಿದ್ದ ಪವಿತ್ರಾ ಮತ್ತು ವೀರೇಶ್ ಮೃತದೇಹಗಳನ್ನು ಹೊರತೆಗೆದು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಈ ಸಂಬಂಧ ಮೃತ ಪವಿತ್ರಾ ತಂದೆ ಚನ್ನಬಸವಯ್ಯ ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಳಿಕ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
