Trending

ಮೈಸೂರು ಪೇಪರ್ ಮಿಲ್ಸ್ (ಎಂ.ಪಿ.ಎಂ) ಪುನರಾರಂಭಕ್ಕೆ ವಿಧಾನಸಭೆಯಲ್ಲಿ ಶಿಫಾರಸು : ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ

Spread the love

ಭದ್ರಾವತಿ : ತರಳಬಾಳು ಶ್ರೀಗಳ ಮಾರ್ಗದರ್ಶನದಂತೆ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಹಿತಾಸಕ್ತಿಯ ಮೇರೆಗೆ, ಮೈಸೂರು ಪೇಪರ್ ಮಿಲ್ಸ್ (ಎಂ.ಪಿ.ಎಂ) ಪುನರಾರಂಭಕ್ಕೆ ವಿಧಾನಸಭೆಯಲ್ಲಿ ಶಿಫಾರಸು ಸಲ್ಲಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂಪಿಎಂ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಆರ್ಥಿಕ, ತಾಂತ್ರಿಕ ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಖಾನೆಯ ಪುನರಾರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವುದರ ಜೊತೆಗೆ ರಾಜ್ಯದ ಅರಣ್ಯಾಧಾರಿತ ಕೈಗಾರಿಕೆಗೆ ಬಲ ಸಿಗಲಿದೆ ಎಂದು ಹೇಳಿದರು.

ಈ ಸಂಬಂಧ ಅಗತ್ಯ ವರದಿ ಹಾಗೂ ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಕೃಷಿ ವಿಜ್ಞಾನಿ ಡಾ. ಎಚ್.ವಿ. ಮಹೇಶ್ವರಪ್ಪ (ಐಸಿಎಆರ್, ಕಾಸರಗೋಡು) ಅವರು ತೆಂಗು ಮತ್ತು ಅಡಿಕೆ ಬೆಳೆಗಳ ಆರ್ಥಿಕ ಹಾಗೂ ಪೌಷ್ಟಿಕ ಮಹತ್ವವನ್ನು ವಿವರಿಸಿದರು. ರೈತರು ಸಮಾಜದ ನಿಜವಾದ ಬೆನ್ನೆಲುಬು ಎಂದು ತಿಳಿಸಿದ ಅವರು, ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಿ, ಇದರಿಂದ ಉತ್ಪಾದಕತೆ, ಆಹಾರ ಭದ್ರತೆ ಹಾಗೂ ರಫ್ತು ಹೆಚ್ಚಾಗಿ ದೇಶದ ಹೆಮ್ಮೆ ಹೆಚ್ಚಲಿದೆ ಎಂದರು

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ತಪೋವನದ ಶ್ರೀ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಎಸ್. ಶಿವಾನಂದಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ದರ್ಶನ್ ಪುಟ್ಟಣ್ಣಯ್ಯ, ಬಸವರಾಜ್ ವೀರಾಪುರ, ಎಚ್.ಆರ್. ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಡಾ. ಆರ್.ಸಿ. ಜಗದೀಶ್, ಡಾ. ಹೆಚ್.ಪಿ. ಮಹೇಶ್ವರಪ್ಪ, ಡಾ. ಎಂ.ವಿ. ಧನಂಜಯ ಸೇರಿದಂತೆ ಹಲವರು ಭಾಗವಹಿಸಿದ್ದರು.

[pj-news-ticker]