ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಕೆ.ಆರ್.ಪುರದ ಶಾಸಕ ಬೈರತಿ ಬಸವರಾಜ್ ಅವರ ಸಕ್ರಿಯ ಪಾತ್ರವಿದೆ. ತನಿಖೆಗೆ ಎಲ್ಲ ರೀತಿ ಸಹಕಾರ ನೀಡಿದ್ದೇನೆ ಎಂದು ಅವರು ಸುಳ್ಳು ಹೇಳಿದ್ದಾರೆ. ತನಿಖೆ ಸಹಕಾರ ನೀಡಿಲ್ಲ. ಬದಲಿಗೆ, ಪ್ರಕರಣದುದ್ದಕ್ಕೂ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸಿದ್ದಾರೆ ಎಂದು ಸಿಐಡಿ ಹೈಕೋರ್ಟ್ ಗೆ ಬಲವಾಗಿ ವಾದಿಸಿತು.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಸಿಐಡಿ ಪರ ವಾದ ಮುಂದುವರಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್, ಭೂ ವ್ಯಾಜ್ಯ ಸಂಬಂಧ ಬಿಕ್ಲು ಶಿವು ಕೊಲೆ ಮಾಡಲಾಗಿದೆ.
ಪ್ರಕರಣದ 1ನೇ ಆರೋಪಿ ಜಗದೀಶ್ ಮತ್ತು 20ನೇ ಆರೋಪಿ ಅಜಿತ್ ಅವರಿಗೆ ಬೈರತಿ ಬಸವರಾಜ್ ಕರೆ ಮಾಡಿ ಸಂಭಾಷಣೆ ನಡೆಸಿದ್ಧಾರೆ ಎಂದು ತಿಳಿಸಿ, ತನಿಖಾಧಿಕಾರಿಗಳು ಸಂಗ್ರಹಿಸಿರುವ ಸಿಡಿಆರ್ ದಾಖಲೆಗಳು, ಆರೋಪಿಗಳು ಒಂದೇ ಸ್ಥಳದಲ್ಲಿದ್ದ ಬಗ್ಗೆ ಜಿಯೋಗ್ರಾಫಿಕಲ್ ಮ್ಯಾಪಿಂಗ್ ಮತ್ತು ಜಗದೀಶ್, ಬೈರತಿ ಬಸವರಾಜ್ ಅವರು ಒಟ್ಟಿಗೆ ಕುಂಭಮೇಳಕ್ಕೆ ಪ್ರಯಾಣಿಸಿರುವ ವಿವರಗಳನ್ನು ಕೋರ್ಟ್ಗೆ ಸಲ್ಲಿಸಿದರು.
ಬಸವರಾಜ್ ಅವರು ಜಗದೀಶ್ ಜೊತೆಗೆ ಕುಂಭಮೇಳದಲ್ಲಿ ಭಾಗಿಯಾಗಿಯಾಗಲು ಒಟ್ಟಿಗೆ ಪ್ರಯಾಗ್ರಾಜ್ ಬಗ್ಗೆ ಪ್ರಯಾಣಿಸಿದ್ದಾರೆ. ಜಗದೀಶ್ ಹುಟ್ಟುಹಬ್ಬದ ಆಚರಣೆ ವೇಳೆ ಒಟ್ಟಿಗೆ ಪೋಟೋ ತೆಗೆಸಿಕೊಂಡಿದ್ಧಾರೆ. ತನಿಖೆ ವೇಳೆ ಈ ಬಗ್ಗೆ ವಿವರಣೆ ಕೇಳಿದಾಗ, ಜಗದೀಶ್ ಮತ್ತು ಅಜಿತ್ ಯಾರೆಂಬುದೇ ನನಗೆ ಗೊತ್ತಿಲ್ಲ. ಕ್ಷೇತ್ರದ ಕಾರ್ಯಕರ್ತರೆಂದು ನನ್ನೊಂದಿಗೆ ಪೋಟೋ ತೆಗೆಸಿಕೊಂಡಿದ್ದಾರೆ. ಜಗದೀಶ್ ಮತ್ತು ಅಜಿತ್ ಅವರ ಫೋಟೋಗೋಳನ್ನು ಟಿವಿಯಲ್ಲಿ ನೋಡಿದಾಗ, ಅವರ ಬಗ್ಗೆ ನನಗೆ ತಿಳಿಯಿತಷ್ಟೇ ಎಂಬುದಾಗಿ ಬೈರತಿ ಬಸವರಾಜ್ ಹೇಳಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹಾಗೆಯೇ, ಅರ್ಜಿದಾರರು ನ್ಯಾಯಾಲಯದ ಮುಂದೆ ಪ್ರಕರಣದ ತ್ವರಿತ ತನಿಖೆ ನಡೆಯಬೇಕು ಎಂದು ವಾದಿಸುತ್ತಾರೆ. ಆದರೆ, ಇತರ ಆರೋಪಿಗಳ ವಿರುದ್ಧ ತನಿಖೆ ನಡೆಯಬೇಕು. ತಮ್ಮ ವಿರುದ್ಧ ಮಾತ್ರ ತನಿಖೆ ನಡೆಯಬಾರದು ಎಂದು ಬಯಸುತ್ತಾರೆ.
ತನಿಖೆ ಆರೋಪಿಯ ಇಚ್ಛೆಗೆ ಅನುಸಾರ ನಡೆಯುವಂತಹದಲ್ಲ. ಹಾಗಾಗಿ, ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆ ಮಂಗಳವಾರಕ್ಕೆ ಮುಂದೂಡಿತು.
