ಹೊಳೆಹೊನ್ನೂರು: ಪೋಷಕರು ಕುಡಿತದ ಚಟ ಬಿಡುವಂತೆ ಬುದ್ಧಿವಾದ ಹೇಳಿದ್ದರಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಅರಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಲ್ಲಿಕಾರ್ಜುನ (35) ಮೃತಪಟ್ಟ ದುರ್ದೈವಿ.
ಮೃತ ಮಲ್ಲಿಕಾರ್ಜುನ ತೀವ್ರ ಮದ್ಯವ್ಯಸನಿಯಾಗಿದ್ದು, ಈ ವಿಚಾರವಾಗಿ ತಂದೆ-ತಾಯಿ ಮಗನಿಗೆ ಮದ್ಯಪಾನ ಬಿಡುವಂತೆ ಹೇಳಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಮಲ್ಲಿಕಾರ್ಜುನ, ತನ್ನದೇ ಅಡಿಕೆ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
