ಪಾಟ್ನಾ: ಮನುಷ್ಯತ್ವವೇ ನಾಚುವಂತಹ ಘಟನೆಯೊಂದು ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ಮೀನುಗಳು ತುಂಬಿದ್ದ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟು ಆತನ ಶವ ರಸ್ತೆಯ ಬದಿಯಲ್ಲಿ ಬಿದ್ದಿದ್ದರೂ, ಅಲ್ಲೇ ಇದ್ದ ಜನರು ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಬದಲು ರಸ್ತೆ ತುಂಬಾ ಬಿದ್ದಿದ್ದ ಮೀನುಗಳನ್ನು ಲೂಟಿ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ಸೀತಾಮರ್ಹಿ ಜಿಲ್ಲೆಯ ಝಾಝಿಹತ್ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ರಿತೇಶ್ ಕುಮಾರ್ (13) ಮೃತ ದುರ್ದೈವಿಯಾಗಿದ್ದಾನೆ.
ರಿತೇಶ್ ಏಳನೇ ತರಗತಿಯಳ್ಳಿ ಓದುತ್ತಿದ್ದು ಎಂದಿನಂತೆ ಬೆಳಿಗ್ಗೆ ಎದ್ದು ಕೋಚಿಂಗ್ ಕ್ಲಾಸ್ಗೆ ಹೊರಟಿದ್ದಾನೆ ಈ ವೇಳೆ ವೇಗವಾಗಿ ಬಂದ ಪಿಕಪ್ ವ್ಯಾನ್ ಬಾಲಕನಿಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.
ಇನ್ನು ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಓಡಿ ಬಂದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಬದಲು ಅಥವಾ ಪೊಲೀಸರಿಗೆ ಕರೆ ಮಾಡುವ ಬದಲು, ರಸ್ತೆ ತುಂಬಾ ಬಿದ್ದಿದ್ದ ಮೀನುಗಳನ್ನು ತುಂಬಿಸಿಕೊಳ್ಳಲು ಶುರುಮಾಡಿದ್ದಾರೆ ಅಷ್ಟು ಹೊತ್ತಿಗಾಗಲೇ ಗಂಭೀರ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ವಿಚಾರ ಬಾಲಕನ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೋಷಕರ ಆಕ್ರಂದನ ಮುಗಿಲು ಮುತ್ತಿಟ್ಟು, ಅಷ್ಟಾದರೂ ಅಲ್ಲಿದ್ದ ಸ್ಥಳೀಯರು ಮಾತ್ರ ಮಾನವೀಯತೆ ಸತ್ತೇ ಹೋದಂತೆ ತಮ್ಮ ಪಾಡಿಗೆ ಮೀನುಗಳನ್ನು ಹೆಕ್ಕುವುದರಲ್ಲೇ ಬ್ಯುಸಿಯಾಗಿದ್ದರು.
ಬಳಿಕ ಬಂದ ಪೊಲೀಸರು ಬಾಲಕನ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
