Trending

ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡಿದ್ದ ತೆಲಂಗಾಣದ ವ್ಯಕ್ತಿ ಸಾವು

Spread the love

ಹೈದರಾಬಾದ್: ಬದುಕಿರುವಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದ ತೆಲಂಗಾಣದ ನಕ್ಕಾ ಇಂದ್ರಯ್ಯ (80) ಅವರು ಭಾನುವಾರ ನಿಧನರಾಗಿದ್ದಾರೆ.

ಇಂದ್ರಯ್ಯ ಅವರು, ಜಿಲ್ಲೆಯ ಲಕ್ಷ್ಮಿಪುರಂ ಗ್ರಾಮದಲ್ಲಿ ತಮ್ಮ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದರು.

ಸಮಾಧಿ ಪಕ್ಕದಲ್ಲಿ ಜೀವನ ಮತ್ತು ಮರಣದ ಕಹಿ ಸತ್ಯದ ಕುರಿತ ಸಂದೇಶವಿರುವ ಫಲಕವನ್ನು ಹಾಕಿದ್ದರು. ಅದರಲ್ಲಿ ‘ಮರಣ ಅನಿವಾರ್ಯ. ಸತ್ತ ನಂತರ ಯಾರೂ ಸಂಪತ್ತನ್ನು ಕೊಂಡೊಯ್ಯುವುದಿಲ್ಲ’ ಎಂದು ಬರೆಯಲಾಗಿದೆ.

ಪ್ರತಿನಿತ್ಯ ಸಮಾಧಿ ಇರುವ ಸ್ಥಳಕ್ಕೆ ಬಂದು ಸ್ಥಳವನ್ನು ಸ್ವಚ್ಛಗೊಳಿಸುವುದು, ಗಿಡಗಳಿಗೆ ನೀರುಣಿಸುವುದು ಹಾಗೇ ಅಲ್ಲಿಯೇ ಕೆಲ ಕಾಲ ಕುಳಿತು ಸಮಯ ಕಳೆಯುವುದು ಅವರ ದಿನಚರಿಯಾಗಿತ್ತು.

ಇಂದ್ರಯ್ಯ ಅವರ ಕೊನೆಯ ಆಸೆಯಂತೆ, ಅವರೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು.

‘ನಾನು ನಾಲ್ಕೈದು ಮನೆಗಳು, ಒಂದು ಶಾಲೆ, ಒಂದು ಚರ್ಚ್‌ ಕಟ್ಟಿದ್ದೇನೆ. ಈಗ ನನ್ನ ಸಮಾಧಿಯನ್ನೂ ನಿರ್ಮಿಸಿದ್ದೇನೆ. ಸಮಾಧಿಯ ನಿರ್ಮಾಣ ಹಲವರಿಗೆ ನೋವುಂಟು ಮಾಡಬಹುದು, ಆದರೆ ನನಗೆ ಸಂತೋಷವನ್ನು ನೀಡಿದೆ. ನನ್ನ ಮರಣದ ನಂತರ ಮಕ್ಕಳಿಗೆ ತೊಂದರೆ ಕೊಡಬಾರದೆಂದು ನಾನೇ ನಿರ್ಮಿಸಿದ್ದೇನೆ’ ಎಂದು ಅವರು ಹಿಂದೆ ಪಿಟಿಐಗೆ ತಿಳಿಸಿದ್ದರು.

[pj-news-ticker]