Trending

ಜುಲೈ 23ಕ್ಕೆ ನರೇಂದ್ರ ಮೋದಿ 3.0 ಮೊದಲ ಬಜೆಟ್: ಸತತ 7ನೇ ಬಾರಿ ನಿರ್ಮಲಾ ಸೀತಾರಾಮನ್ ಆಯವ್ಯಯ ಮಂಡನೆ

Spread the love

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಕೇಂದ್ರ ಬಜೆಟ್ ಜುಲೈ 23ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನವು ಜುಲೈ 22ರಂದು ಆರಂಭವಾಗಲಿದ್ದು, ಆಗಸ್ಟ್ 12ರಂದು ಕೊನೆಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಪ್ರಕಟಿಸಿದರು.

“ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಗೌರವಾನ್ವಿತ ರಾಷ್ಟ್ರಪತಿಯವರು 2024ರ ಬಜೆಟ್ ಅಧಿವೇಶನಕ್ಕಾಗಿ ಸಂಸತ್‌ನ ಎರಡೂ ಸದನಗಳನ್ನು ಕರೆಯುವ ಪ್ರಸ್ತಾವನೆಯನ್ನು ಅಂಗೀಕರಿಸಿದ್ದಾರೆ. ಜುಲೈ 22ರಿಂದ ಆಗಸ್ಟ್ 12ರವರೆಗೆ (ಸಂಸದೀಯ ವ್ಯವಹಾರಗಳ ಅಗತ್ಯಕ್ಕೆ ಅನುಗುಣವಾಗಿ) ಅಧಿವೇಶನ ನಡೆಯಲಿದೆ. 2024- 25ನೇ ಸಾಲಿನ ಕೇಂದ್ರ ಬಜೆಟ್ ಅನ್ನು 2024ರ ಜುಲೈ 23ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು” ಎಂದು ಕಿರಣ್ ರಿಜಿಜು ಅವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಆದಾಯ ತೆರಿಗೆ ಮಿತಿ ಏರಿಕೆಗೆ ಕಾತರದಿಂದ ಕಾಯುತ್ತಿರುವ ವೇತನದಾರರಿಗೆ ಇನ್‌ಕಂ ಟ್ಯಾಕ್ಸ್ ರಚನೆಯಲ್ಲಿ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆ ಇದೆ. ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಘೋಷಣೆ ಮಾಡಲಾಗುತ್ತದೆ ಎಂದೂ ನಿರೀಕ್ಷಿಸಲಾಗಿದೆ.

[pj-news-ticker]