Trending

ಶಬರಿಮಲೆ ತುಪ್ಪದ ಪ್ರಸಾದ ಮಾರಾಟದಲ್ಲಿ ಭಾರಿ ಅಕ್ರಮ

Spread the love

ತಿರುವನಂತಪುರ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನ ನಾಪತ್ತೆ ಪ್ರಕರಣ ಇನ್ನೂ ಮಾಸುವ ಮುನ್ನವೇ, ತುಪ್ಪದ ಪ್ರಸಾದ ಮಾರಾಟದಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ತನಿಖೆಯ ಪ್ರಕಾರ, ತುಪ್ಪದ ಪ್ರಸಾದ ಮಾರಾಟದಲ್ಲಿ ಸುಮಾರು ₹16 ಲಕ್ಷ ಮೊತ್ತದ ಅಕ್ರಮ ನಡೆದಿರುವುದು ದೃಢಪಟ್ಟಿದ್ದು, ಈ ಕುರಿತು ತನಿಖೆ ಮುಂದುವರಿದಿದೆ ಎಂದು ಶಬರಿಮಲೆ ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.

ಆದರೆ, ತುಪ್ಪ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ತೀರ್ಥಯಾತ್ರೆ ಅವಧಿಯಲ್ಲಿ ದೇವಸ್ಥಾನದ ಅಧಿಕೃತ ಕೌಂಟರ್‌ಗಳ ಮೂಲಕ ಭಕ್ತರಿಗೆ ತುಪ್ಪದ ಪ್ರಸಾದ ಮಾರಾಟ ನಡೆಯುತ್ತಿದ್ದು, ಮಾರಾಟದಿಂದ ಬಂದ ಹಣ ಮತ್ತು ಮಾರಾಟವಾದ ಒಟ್ಟು ಪ್ಯಾಕೆಟ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ನಡೆದ ಶಬರಿಮಲೆ ಚಿನ್ನದ ಹಗರಣವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟುಮಾಡಿತ್ತು. ಈ ಪ್ರಕರಣದಲ್ಲಿ ಸಿಪಿಐ (ಎಂ) ಪಕ್ಷದ ನಾಯಕರ ಬಂಧನವಾಗಿದ್ದು, ಮಾಜಿ ಸಚಿವರು ಸೇರಿದಂತೆ ಹಲವು ಎಲ್‌ಡಿಎಫ್ ನಾಯಕರ ಮೇಲೆ ನಿಗಾ ವಹಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಬರಿಮಲೆ ಹಗರಣವನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಲಾಭ ಪಡೆದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಈ ವಿಚಾರವನ್ನು ಪ್ರಮುಖ ಅಸ್ತ್ರವಾಗಿಸಿಕೊಳ್ಳಲು ಯುಡಿಎಫ್ ಸಜ್ಜಾಗಿದೆ. ಇದೇ ವೇಳೆ, ಬಿಜೆಪಿ ಕೂಡ ಶಬರಿಮಲೆ ಸಂಬಂಧಿತ ಹಗರಣಗಳ ಕುರಿತು ಜನರ ಗಮನ ಸೆಳೆಯಲು ಮುಂದಾಗಿದೆ.

[pj-news-ticker]