ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರನ ಕಾರು ಚಾಲಕನಿಗೆ ಹಾಡಹಗಲೇ ಚಾಕು ಇರಿದಿರುವ ಘಟನೆ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ನಡೆದಿದೆ.
ಚಾಲಕ ಬಸವಂತ ಕಡಲೇಕರ್ (32) ಎಂಬಾತನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿಯಾಗಿರುವ ಬಸವಂತ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕ ಆಗಿದ್ದಾರೆ. ಬೈಕ್ ಮೇಲೆ ಬಂದು ಇಬ್ಬರೂ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಕಾರು ನಿಲ್ಲಿಸಿ ಕೆಳಗೆ ನಿಂತಿದ್ದ ಬಸವಂತನ ಮೇಲೆ ಏಕಾಏಕಿ ಚಾಕುವಿನಿಂದ ಇರಿದಿದ್ದಾರೆ.
ತಕ್ಷಣ ಬಸವಂತ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಬರಮಣಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಅವರು ಸಹ ಆಗಮಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಹಣಕಾಸಿನ ವಿಚಾರಕ್ಕೆ ಗಲಾಟೆ ಆಗಿ ಕಿಡಿಗೇಡಿಗಳು ಚಾಕು ಇರಿದಿದ್ದಾರೆ ಎನ್ನಲಾಗಿದೆ.
