ನವದೆಹಲಿ: ಕೆಂಪು ಕೋಟೆಯ ಬಳಿ ನಡೆದ ಬಾಂಬ್ ಸ್ಫೋಟದ ಸಂಚಿಗೆ ಐವರು ವೈದ್ಯರು ಹಣ ನೀಡಿದ್ದಾರೆ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಜಮ್ಮಿಲ್ ಗನೈ ಸ್ಪೋಟಕ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.
ಬಾಂಬ್ ಸ್ಪೋಟಕ್ಕೆ ಮುಜಮ್ಮಿಲ್ ಗನೈ ಸ್ವತಃ 5 ಲಕ್ಷ ನೀಡಿದ್ದು, ಉಳಿದಂತೆ ಅದೀಲ್ ಅಹ್ಮದ್ ರಾಥರ್ 8 ಲಕ್ಷ ಮತ್ತು ಮುಜಫರ್ ಅಹ್ಮದ್ ರಾಥರ್ 6 ಲಕ್ಷ ರೂ. ನೀಡಿದ್ದಾರೆ ಎಂದು ಗನೈ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಹಲವಾರು ನಗರಗಳಲ್ಲಿ ಸಂಘಟಿತ ಭಯೋತ್ಪಾದಕ ದಾಳಿಗಳನ್ನು ನಡೆಸಲು ಹಣ ಹೇಗೆ ಸಂಗ್ರಹಿಸಲಾಗಿದೆ ಎನ್ನುವ ಕುರಿತು ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮುಜಮ್ಮಿಲ್ ಗನೈ ಹಲವು ಸ್ಪೋಟಕ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.
ಭಯೋತ್ಪಾದಕ ದಾಳಿಗಳನ್ನು ನಡೆಸಲು ಕಳೆದ ಎರಡು ವರ್ಷಗಳಿಂದ ಯೋಜನೆ ನಡೆಯುತ್ತಿದೆ. ಇದಕ್ಕಾಗಿ ಐವರು ವೈದ್ಯರಿಂದ 26 ಲಕ್ಷ ರೂ. ಹಣವನ್ನು ಸಂಗ್ರಹಿಸಲಾಗಿದೆ. ಸ್ಫೋಟಕಗಳು ಮತ್ತು ರಿಮೋಟ್-ಟ್ರಿಗ್ಗರಿಂಗ್ ಸಾಧನಗಳನ್ನು ಖರೀದಿಸಲು ಹಣವನ್ನು ಬಳಸಲಾಗಿದೆ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಬಾಂಬ್ ಸ್ಪೋಟಕ್ಕೆ ಗನೈ ಸ್ವತಃ 5 ಲಕ್ಷ ರೂ. ನೀಡಿದ್ದು, ಅದೀಲ್ ಅಹ್ಮದ್ ರಾಥರ್ 8 ಲಕ್ಷ ಮತ್ತು ಮುಜಫರ್ ಅಹ್ಮದ್ ರಾಥರ್ 6 ಲಕ್ಷ ರೂ. ನೀಡಿದ್ದಾರೆ. ಶಾಹೀನ್ ಶಾಹಿದ್ 5 ಲಕ್ಷ, ಡಾ. ಉಮರ್ ಉನ್-ನಬಿ ಮೊಹಮ್ಮದ್ 2 ಲಕ್ಷ ರೂ. ನೀಡಿದ್ದಾರೆ. ಬಾಂಬ್ ಸ್ಪೋಟಕ್ಕೂ ಮುನ್ನ ಎಲ್ಲ ಹಣವನ್ನು ಉಮರ್ಗೆ ಹಸ್ತಾಂತರಿಸಲಾಯಿತು.
ಬಾಂಬ್ ಸ್ಪೋಟಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಗುರುಗ್ರಾಮ್ ಮತ್ತು ನುಹ್ನಿಂದ ಸುಮಾರು 3 ಲಕ್ಷ ರೂ. ನೀಡಿ ಖರೀದಿ ಮಾಡಲಾಗಿದೆ. ಸ್ಫೋಟಕಗಳನ್ನು ತಯಾರಿಸಲು ಹಲವು ದಿನಗಳು ಬೇಕಾಗಿತ್ತು. ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾಡಲಾಗಿತ್ತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಪೋಟಕ ತಯಾರಿಯ ಮೇಲ್ವಿಚಾರಣೆಯನ್ನು ಸ್ವತಃ ಉಮರ್ ಉನ್-ನಬಿಯೇ ನೋಡಿಕೊಳ್ಳುತ್ತಿದ್ದ. ಆತ ರಿಮೋಟ್ ಡಿಟೋನೇಟರ್ಗಳು ಮತ್ತು ಸರ್ಕ್ಯೂಟ್ರಿಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದನು. ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಜವಾಬ್ದಾರಿಗಳನ್ನು ಸ್ಪಷ್ಟ ವಿಭಜನೆ ಮಾಡಲಾಗಿತ್ತು. ಇದರ ಮೇಲುಸ್ತುವಾರಿಯನ್ನು ಸ್ವತಃ ಉಮರ್ ನೋಡಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿ ಹೇಳಿದ್ದಾರೆ.
