ಚಿತ್ರದುರ್ಗ : ದಿನಗೂಲಿ ಕೂಲಿ ಕೆಲಸದಿಂದ ಜೀವನ ನಡೆಸುತ್ತಿದ್ದ ಸರಳ ಕಾರ್ಮಿಕರ ಕುಟುಂಬದಲ್ಲಿ ಬೆಳೆದ ಚೌಲಿಹಳ್ಳಿ ಗ್ರಾಮದ ಸಂದೀಪ ಎಲ್. ಅವರು ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟದಿಂದ ಪಿಎಚ್.ಡಿ ಪದವಿ ಪಡೆದು ಗಮನಸೆಳೆದಿದ್ದಾರೆ.
ಶ್ರೀ ಲೋಕೇಶ್ವರಪ್ಪ ಮತ್ತು ಶ್ರೀಮತಿ ತಿಪ್ಪಮ್ಮ ದಂಪತಿಗಳ ಪುತ್ರರಾದ ಸಂದೀಪ ಅವರು ಬಡತನದ ನಡುವೆಯೂ ವಿದ್ಯೆಯನ್ನೇ ಬದುಕು ಬದಲಿಸುವ ಶಕ್ತಿಯಾಗಿ ಪರಿಗಣಿಸಿ ಪರಿಶ್ರಮದ ಮೂಲಕ ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ್ದಾರೆ.
“ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಹಾಗೂ ಪ್ರಶಿಕ್ಷಕರ–ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಈ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ತಜ್ಞ ಪ್ರೊ. ಜಗನ್ನಾಥ್ ಕೆ. ಡಾಂಗೆ ಮಾರ್ಗದರ್ಶನ ನೀಡಿದ್ದಾರೆ.
ಬಡತನ ಅಡ್ಡಿಯಲ್ಲ ಎನ್ನುವುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿರುವ ಸಂದೀಪ ಅವರ ಸಾಧನೆಗೆ ಸ್ನಾತಕೋತ್ತರ ಶಿಕ್ಷಣಶಾಸ್ತ್ರ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು, ಸಿಬ್ಬಂದಿ, ಕುಟುಂಬದವರು, ಹಿತೈಷಿಗಳು ಹಾಗೂ ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.
