ಬೆಂಗಳೂರು : ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಭದ್ರತಾ ಸಿಬ್ಬಂದಿಯನ್ನು ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸದ ಭದ್ರತಾ ಗಾರ್ಡ್ ಹಿಂಪಡೆದುಕೊಳ್ಳಲಾಗಿದೆ.
ಹಾಗೇ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಉಚ್ಛಾಟಿತ ನಾಯಕ ಕೆಎಸ್ ಈಶ್ವರಪ್ಪನವರ ನಿವಾಸದ ಗಾರ್ಡ್ ಹಾಗೂ ಬೆಂಗಾವಲು ಭದ್ರತೆ ಎರಡನ್ನೂ ಗೃಹ ಇಲಾಖೆ ವಾಪಸ್ ಪಡೆದುಕೊಂಡಿದೆ. ಇನ್ನು ಗೃಹ ಇಲಾಖೆಯ ಈ ನಡೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಮಹದೇವಪ್ಪಗೆ ಭದ್ರತೆ ಹೆಚ್ಚಳ
ಛಲವಾದಿ ನಾರಾಯಣಸ್ವಾಮಿ ಹಾಗೂ ಈಶ್ವರಪ್ಪನವರ ಭದ್ರತಾ ಗಾರ್ಡ್ ವಾಪಡ್ ಪಡೆದುಕೊಂಡಿರುವ ಗೃಹ ಇಲಾಖೆ, ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಿದೆ. ಹೌದು…ಸಚಿವ ಮಹದೇವಪ್ಪ ಅವರಿಗೆ ಬೆಂಗಾವಲು ಭದ್ರತೆ ಸಿಬ್ಬಂದಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲರಾಗಿದ್ದು, ನನ್ನ ಭದ್ರತೆ ವಾಪಸ್ ಪಡೆದುಕೊಂಡು ಪ್ರಿಯಾಂಕ್ ಖರ್ಗೆಗೆ ಭದ್ರತೆ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಭದ್ರತಾ ದೃಷ್ಟಿಯಿಂದ ಕೊಡಲೇ ಬೇಕು. ಆದರೆ ಮೂವರು ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ ಇದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ, ಪ್ರಿಯಾಂಕ್ ಖರ್ಗೆ ಕುಟುಂಬವೂ ಕೂಡ ಹೊಣೆ ಎಂದು ಆಕ್ರೋಶ ಹೊರಹಾಕಿದರು.
