Trending

ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಶಿವಮೊಗ್ಗದಲ್ಲಿ ಬಂಜಾರ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ : ಸರ್ಕಾರದ ವಿರುದ್ಧ ಆಕ್ರೋಶ

Spread the love

ಶಿವಮೊಗ್ಗ : ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ.12ರಿಂದ ಶಿವಮೊಗ್ಗ ಜಿಲ್ಲಾ ಧಿಕಾರಿಗಳ ಕಛೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಇಂದು 9ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಸೈನ್ಸ್ ಮೈದಾನದಿಂದ ಡಿಸಿ ಕಛೇರಿಯವರೆಗೆ ಸಾವಿರಾರು ಪ್ರತಿಭಟನಾ ಕಾರರು ಮೆರವಣಿಗೆ ಹಮ್ಮಿಕೊಂಡು, ಗೋಪಿವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟಿನ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸಿದ್ಧಪಡಿಸಲಾಗಿರುವ ನಾಗಮೋಹನ್‌ದಾಸ್ ವರದಿಯು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮುಂದುವರೆದ ಭಾಗದಂತ್ತಿದ್ದು, ಈ ವರದಿಯ ಸಾರಾಂಶಗಳು ವಾಸ್ತವಿಕ ಅಂಕಿಸಂಖ್ಯೆಗಳಿಂದ ದೂರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಂಕಿಅಂಶಗಳು ದಮನಿತ ಸಮುದಾಯಗಳ ಅನುಮಾನಕ್ಕೆ ಕಾರಣವಾಗಿದೆ ಮತ್ತು ಈ ಅಂಕಿಅಂಶಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕಿದೆ. ಪರಿಶಿಷ್ಟ ಜಾತಿಯ ನಿಖರ ಅಂಕಿ ಸಂಖ್ಯೆಗಳನ್ನು ಸರ್ಕಾರದ ಇಲಾಖೆಗಳು ನೀಡಿಲ್ಲ. ಸರ್ಕಾರ ಈ ಅಪೂರ್ಣ ವರದಿಯನ್ನೇ ಸಣ್ಣ-ಪುಟ್ಟ ಬದಲಾವಣೆಯೊಂದಿಗೆ ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನ್ಯಾ. ನಾಗಮೋಹನ್‌ದಾಸ್ ವರದಿಯಲ್ಲಿ ಅನುಸರಿಸಿರುವ ೨೩ ಮಾನದಂಡಗಳಲ್ಲಿ ಡಿ ವರ್ಗದಲ್ಲಿರುವ ಲಂಬಾಣಿ ಸೇರಿದಂತೆ ಇತರೆ ಜಾತಿಗಳು ಏಳು ವಿಷಯಗಳಲ್ಲಿ ಮಾತ್ರ ಪ್ರಗತಿ ಹೊಂದಿರುವುದನ್ನು ಕಾಣಿಸಲಾಗಿದ್ದು, ಉಳಿದ ೧೬ ಮಾನದಂಡಗಳಲ್ಲಿ ಸಿ ವರ್ಗದವರೇ ಪ್ರಗತಿ ಹೊಂದಿರುವಾಗ, ಸಿ ವರ್ಗದವರಿಗೆ ಶೇ.೬ರಷ್ಟು ಮೀಸಲಾತಿ ನೀಡಿ ಡಿ ವರ್ಗದವರಿಗೆ ಶೇ.೪ರಷ್ಟು ಮೀಸಲಾತಿ ನಿಗಧಿಗೊಳಿಸಿರುವುದು ಸರ್ಕಾರದಿಂದ ಆದ ಅನ್ಯಾಯವಾಗಿದ್ದು, ಕಳೆದ ಎಂಟು ದಿನಗಳಿಂದ ರಾಜ್ಯಾದ್ಯಂತ ಬಂಜಾರ ಸಮುದಾಯ ಸರ್ಕಾರದ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ.

ಒಂಬತ್ತ ನೇ ದಿನವಾದ ಇಂದು ಜಿಲ್ಲೆಯ ವಿವಿಧ ತಾಂಡಾಗಳಿಂದ ಬಂಜಾರ ಸಮುದಾಯದವರು ಸೇರಿ ನಗರದಲ್ಲಿ ಬೃಹತ್ ಪ್ರಟಿಭಟನೆ ನಡೆಸುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸಂದರ್ಭದಲ್ಲಿ ಬಂಜಾರ ಸಮುದಾಯದ ಗುರುಗಳು, ಮಾಜಿ ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ, ರಾಜೀವ್ ಕುಡಚಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಕೆಜೆ. ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾ ನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್ ಸೇರಿದಂತೆ  ವಿವಿಧ ತಾಂಡಾದ ನಾಯಕ್ ಡಾವ್ ಕಾರಾಬಾರಿ ಹಾಗೂ ತಾಂಡಾದ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

[pj-news-ticker]