Breaking
Sat. Apr 20th, 2024

ಮದುವೆಗೆ ಕೆಲವೇ ಗಂಟೆ ಇರುವಾಗ ಜಿಮ್ ಮಾಲೀಕನ ಭೀಕರ ಹತ್ಯೆ: ತಂದೆಯೇ ಹಂತಕ

By Mooka Nayaka News Mar 8, 2024
Spread the love

ಹೊಸದಿಲ್ಲಿ: ಮದುವೆ ಮನೆ ಸಂಭ್ರಮದಲ್ಲಿದ್ದ ಕುಟುಂಬ ಆಘಾತ ಹಾಗೂ ನೋವಿನಿಂದ ತತ್ತರಿಸಿದೆ. ಹಸೆಮಣೆ ಏರುವ ಕೆಲವೇ ಗಂಟೆಗಳ ಮುನ್ನ ದಕ್ಷಿಣ ದಿಲ್ಲಿಯ ಜಿಮ್ ಮಾಲೀಕನನ್ನು ಹತ್ಯೆ ಮಾಡಲಾಗಿದೆ. ಆತನನ್ನು ಕೊಂದಿದ್ದು, ಸ್ವತಃ ಆತನ ತಂದೆ.

ಮದುವೆಯಾಗಬೇಕಿದ್ದ ಜಿಮ್ ಮಾಲೀಕ ಗೌರವ್ ಸಿಂಘಾಲ್ (29) ಸಂಭ್ರಮದ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಕೊಲೆಯಾಗಿದ್ದಾನೆ. ಆತನನ್ನು ಕೊಂದ ಆರೋಪದಲ್ಲಿ ರಂಗಲಾಲ್‌ನನ್ನು ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಮಗ ಗೌರವ್ ಪ್ರತಿ ದಿನವೂ ತನಗೆ ಅವಮಾನ ಮಾಡುತ್ತಿದ್ದ ಎಂಬ ಕೋಪದಿಂದ ರಂಗಲಾಲ್ ಈ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಫಿಟ್ ಬಾಕ್ಸ್ ಎಂಬ ಹೆಸರಿನ ಜಿಮ್ ನಡೆಸುತ್ತಿದ್ದ ಗೌರವ್ ಸಿಂಘಾಲ್, ದೇವ್ಲಿ ಎಕ್ಸ್‌ಟೆನ್ಷನ್‌ನಲ್ಲಿ ಮನೆಯಲ್ಲಿ ವಾಸವಿದ್ದ. ಆತನ ಮುಖ ಹಾಗೂ ಎದೆಯ ಮೇಲೆ 15 ಬಾರಿ ಚಾಕುವಿನಿಂದ ಇರಿಯಲಾಗಿದ್ದು, ಸ್ಥಳದಲ್ಲಿಯೇ ಮತಪಟ್ಟಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಗೌರವ್‌ಗೆ ಮದುವೆ ನಿಶ್ಚಯವಾಗಿದ್ದು, ಅದಕ್ಕಾಗಿ ತಯಾರಿ ನಡೆಯುತ್ತಿತ್ತು. ಆದರೆ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಆತನನ್ನು ಸ್ವಂತ ತಂದೆಯೇ ಭೀಕರವಾಗಿ ಕೊಲೆ ಮಾಡಿದ್ದಾನೆ.

ಗೌರವ್ ಮದುವೆ ಮೆರವಣಿಗೆಗಾಗಿ ಮನೆಯ ಸಮೀಪ ಸಂಬಂಧಿಕರು, ಅತಿಥಿಗಳು ಸೇರಿದ್ದರು. ಜೋರಾದ ಬಾಜಾ ಭಜಂತ್ರಿಯೊಂದಿಗೆ ಅವರು ಸಂಭ್ರಮಾಚರಣೆ ನಡೆಸುತ್ತಿದ್ದರು. ಆದರೆ ಅವರು ಕಾಯುತ್ತಿದ್ದ ಮದುಮಗ ಮಾತ್ರ ಮದುವೆ ಸಡಗರಕ್ಕೆ ಸೇರಿಕೊಂಡಿರಲಿಲ್ಲ. ಇದರಿಂದ ಅನುಮಾನಗೊಂಡ ಕೆಲವು ಸಂಬಂಧಿಕರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಪಕ್ಕದ ಪಾರ್ಕ್‌ನಲ್ಲಿ ಭಯಾನಕ ಸ್ಥಿತಿಯಲ್ಲಿದ್ದ ಗೌರವ್ ಶವ ಪತ್ತೆಯಾಗಿದೆ. ಇದರಿಂದ ಮದುವೆ ಸಡಗರ, ದುಃಖ ಹಾಗೂ ಶೋಕವಾಗಿ ಬದಲಾಗಿದೆ.

ಗುರುವಾರ ಮುಂಜಾನೆ ಸಮೀಪದ ರಾಜು ಪಾರ್ಕ್‌ನಲ್ಲಿ ಗೌರವ್ ದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾಗಿ ದಕ್ಷಿಣ ದಿಲ್ಲಿ ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

ಘಟನೆ ಬಳಿಕ ಗೌರವ್ ತಂದೆ ರಂಗಲಾಲ್ ಎಲ್ಲಿಯೂ ಕಾಣಿಸಿರಲಿಲ್ಲ. ಇದರಿಂದ ಈ ಕೊಲೆಯಲ್ಲಿ ಆತನದೇ ಕೈವಾಡ ಇರಬಹುದು ಎಂಬ ಶಂಕೆ ಪೊಲೀಸರಲ್ಲಿ ಮೂಡಿತ್ತು. ಆತನ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು. ಸಂಜೆ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಕುಟುಂಬದವರಲ್ಲಿ ಯಾರಿಗೂ ಗೌರವ್ ಮೇಲೆ ಹಗೆತನ ಇಲ್ಲದ ಕಾರಣ, ಒಳಗಿನವರು ಯಾರೂ ಈ ಕೃತ್ಯ ಎಸಗಿರಲು ಸಾಧ್ಯ ಇಲ್ಲ ಎಂದು ಸಂಬಂಧಿಕರು ಹೇಳಿದ್ದರು. ಆದರೆ ರಂಗಲಾಲ್ ಬಂಧನ ಅವರಿಗೆ ಆಘಾತದ ಜತೆ ಅಚ್ಚರಿ ಉಂಟುಮಾಡಿದೆ.

Related Post