Trending

ಬೆತ್ತಲೆ ಜಗತ್ತು ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಸಿಕ್ಕಿದ್ಯಾ? : ಪ್ರತಾಪ್ ಸಿಂಹಗೆ ವಿಶ್ವನಾಥ್ ಪ್ರಶ್ನೆ

Spread the love

ಮೈಸೂರು : ಪ್ರತಾಪ್ ಸಿಂಹ ಅವರೇ ನೀವು ಬರೆಯುತ್ತಿದ್ದ ಬೆತ್ತಲೆ ಜಗತ್ತು ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಸಿಕ್ಕಿದ್ಯಾ?‌ ಎಂದು ಎಂಎಲ್​​ಸಿ ಹೆಚ್. ವಿಶ್ವನಾಥ್ ಅವರು ಪ್ರಶ್ನಿಸಿದ್ದಾರೆ.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬಾನು ಮುಷ್ತಾಕ್ ಅವರು ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಬಾನು ಮುಷ್ತಾಕ್ ಕೃತಿಯನ್ನು ಇಂಗ್ಲಿಷ್​​ಗೆ ಭಾಷಾಂತರ ಮಾಡಿದ ದೀಪಾ ಬಸ್ತಿಯವರಿಗೂ ಬೂಕರ್ ಪ್ರಶಸ್ತಿ ನೀಡಲಾಗಿದೆ. ಇಬ್ಬರಿಗೂ ಸಮಾನವಾಗಿ ಬೂಕರ್ ಪ್ರಶಸ್ತಿ ನೀಡಲಾಗಿದೆ. ಬಾನು ಮುಷ್ತಾಕ್ ಬಹಳ ಸಾಧನೆ ಮಾಡಿದ್ದಾರೆ. ರೈತ ಚಳವಳಿ, ಭಾಷಾ ಚಳವಳಿ, ವಕೀಲ ವೃತ್ತಿ ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಆದರೆ, ಕೆಲವರು ಇವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು‌ ಕಿಡಿಕಾರಿದ್ದಾರೆ.

ನಮ್ಮದು ಬಹುತ್ವದ ದೇಶವಾಗಿದೆ. ಮಂತ್ರಿಗಳಾಗಿದ್ದವರೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಪ್ರತಾಪಿಯಂತೆ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್ ಮೆಂಬರ್ ಆಗಿದ್ದವರು ಮಹಿಳಾ ಸಾಧಕಿಯ ವಿರುದ್ಧ ಮಾತನಾಡಿರುವುದು ಸರಿಯಲ್ಲ. ಈ ಮೂಲಕ ಮೈಸೂರನ್ನು ಏನು ಮಾಡಬೇಕು ಎಂದುಕೊಂಡಿದ್ದೀರಿ?‌ ಎಂದು ಪ್ರಶ್ನಿಸಿದ್ದಾರೆ.

ದಸರಾ ಎಂದರೆ ಕಡಲೆಕಾಯಿ ಮಾರುವವನಿಂದ ಹಿಡಿದು ಸಿಹಿ ಮಾರಾಟ ಮಾಡುವವನವರೆಗೆ ಎಲ್ಲಾ ವರ್ಗದ ಜನರಿಗೆ, ಪ್ರವಾಸೋದ್ಯಮಕ್ಕೆ ಆಸರೆ ನೀಡುತ್ತದೆ. ಆರ್. ಅಶೋಕ್ ಮಾತು ಶೇಮ್ ಶೇಮ್. ವಿರೋಧ ಪಕ್ಷದ ನಾಯಕ‌ನಾಗಿದ್ದುಕೊಂಡು ಜನಾಂಗೀಯ ದ್ವೇಷ ಹಂಚುವ ಮಾತನಾಡಬಾರದು ಎಂದಿದ್ದಾರೆ.

ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಅವರು, ಚಾಮುಂಡಿ ಬೆಟ್ಟ ‌ಹಿಂದೂಗಳಿಗೆ ಸೇರಿದ್ದಲ್ಲ ಎನ್ನುವುದು ತಪ್ಪು, ಅದೇ ರೀತಿ ಹಿಂದೂಗಳಿಗೆ ಸೇರಿದ್ದು ಎನ್ನುವುದು ಸಹ ತಪ್ಪು. ಪೈಪೋಟಿಯ ಮೇಲೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು‌‌ ಎಂದು ಸಲಹೆ ನೀಡಿದ್ದಾರೆ.

[pj-news-ticker]